ಚಿತ್ರದುರ್ಗ :ದಕ್ಷಿಣ ಭಾರತದ ಬೃಹತ್ ಉತ್ಸವಗಳಲ್ಲಿ ಅಗ್ರಸ್ಥಾನ ಪಡೆದಿರುವ ಚಿತ್ರದುರ್ಗದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದೆ.
ವಿಶ್ವ ಹಿಂದು ಪರಿಷತ್- ಬಜರಂಗದಳದ ನೇತೃತ್ವದಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದ ಜೈನಧಾಮದಲ್ಲಿ ಗಣಪತಿ ಪ್ರತಿಷ್ಟಾಪಿಸಲಾಗಿದೆ. ವಿಸರ್ಜನಾ ಮೆರವಣಿಗೆಯ ಸಿದ್ಧತೆಗಳ ನಡೆದಿವೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿದ ಎಸ್ಪಿ ಜಿ.ರಾಧಿಕಾ ಸಂಜೆ ರೂಟ್ ಮಾರ್ಚ್ ನಡೆಸಿದರು.
ಎಲ್ಲೆಡೆ ಬಂದೋಬಸ್ತ್; ವಿಸರ್ಜನಾ ಮೆರೆವಣಿಗೆ ಸಾಗುವ ಮತ್ತು ನಗರದ ಪ್ರಮುಖ ಸ್ಥಳಗಳು ಸೇರಿ 60 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಅವುಗಳ ನಿರ್ವಹಣೆಗೆ 10 ಜನ ಸಿಬ್ಬಂದಿಯವರನ್ನು ನೇಮಕ ಮಾಡಲಾಗಿದೆ. ಬಂದೋಬಸ್ತ್ ಕರ್ತವ್ಯಕ್ಕಾಗಿ ಹ್ಯಾಂಡಿಕ್ಯಾಮ್ ಹಾಗೂ ಬ್ಯಾಡಿ ವೋರ್ನ್ ಕ್ಯಾಮಗಳನ್ನು ಸಿಬ್ಬಂದಿಯವರಿಗೆ ನೀಡಲಾಗಿದೆ. ವಿಸರ್ಜನಾ ಮೆರೆವಣಿಗೆ ಸಾಗುವ ಮತ್ತು ನಗರದ ಪ್ರಮುಖ ಸ್ತಳಗಳು ಸೇರಿ 28 ಕಡೆಗಳಲ್ಲಿ ಬ್ಯಾರಿಕೇಡಿಂಗ್ ಮಾಡಲಾಗಿದೆ ಎಂದು ತಿಳಿಸಿದರು.
ಎಎಸ್ಪಿ ನೇತೃತ್ವದಲ್ಲಿ 7 ಡಿಎಸ್‍ಪಿ, 17 ಸಿಪಿಐ, 41 ಪಿಎಸ್‍ಐ, 60 ಎಎಸ್‍ಐ, 770 ಪೇದೆಗಳು, 34 ಮಹಿಳಾ ಸಿಬ್ಬಂದಿ, 100 ಹೋಮ್‍ಗಾರ್ಡ್ ಹಾಗೂ 100 ಜನ ಸ್ವಯಂಸೇವಕರು, ಡಿಎಆರ್‍ನ 8, ಕೆಎಸ್‍ಆರ್‍ಪಿಯ 3 ಹಾಗೂ ಕ್ಯೂಆರ್‍ಟಿ 4 ತುಕಡಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನಗರದ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಪಿಕೆಟಿಂಗ್ ಕರ್ತವ್ಯಕ್ಕೆ ಸಿಬ್ಬಂದಿಯವರನ್ನು ನೇಮಿಸಲಾಗಿದ್ದು, ದಿನದ 24*7 ಅಧಿಕಾರಿಗಳು ಪೆಟ್ರೋಲಿಂಗ್ ಕರ್ತವ್ಯದಲ್ಲಿರುತ್ತಾರೆ ಎಂದು ವಿವರಿಸಿದರು.
ಸಂಚಾರಿ ಮಾರ್ಗ ಬದಲಾವಣೆ : ಬೆಂಗಳೂರು ಹಾಗೂ ಚಳ್ಳಕೆರೆ ಮಾರ್ಗದಿಂದ ಬರುವ ವಾಹನಗಳು ರಾ.ಹೆ.4ರ ಬೈಪಾಸ್ ರಸ್ತೆ ಮುಖಾಂತರ ಬಂದು ಮೆದೇಹಳ್ಳಿ ರಸ್ತೆ ಮತ್ತು ಎ.ಪಿ.ಎಂ.ಸಿ. ಮಾರುಕಟ್ಟೆ ಮುಖಾಂತರ ಬಸ್ ನಿಲ್ದಾಣಗಳಿಗೆ ಬಂದು ಪುನಃ ಅದೇ ಮಾರ್ಗದಲ್ಲಿ ಹೊರ ಹೋಗುವುದು.
ದಾವಣಗೆರೆ ಮಾರ್ಗದಿಂದ ಬರುವ ವಾಹನಗಳು ಜೆ.ಎಂ.ಐ.ಟಿ. ವೃತ್ತದ ಮುಖಾಂತರವಾಗಿ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಪುನಃ ವಾಪಾಸು ಅದೇ ಮಾರ್ಗದಲ್ಲಿ ಸಂಚರಿಸುವುದು.
ಶಿವಮೊಗ್ಗ, ಹೊಳಲ್ಕೆರೆ, ಭೀಮಸಮುದ್ರ ಮಾರ್ಗದಿಂದ ಬರುವ ವಾಹನಗಳು ರಾ.ಹೆ.13ರ ಬೈಪಾಸ್‍ನಲ್ಲಿ ಮುರುಘಾ ಮಠದವರೆಗೆ ಹೋಗಿ ನಂತರ ರಾ.ಹೆ.4ರ ಬೈಪಾಸ್ ರಸ್ತೆ ಮುಖಾಂತರ ಕೆ.ಎಸ್.ಅರ್.ಟಿ. ಮತ್ತು ಖಾಸಗಿ ಬಸ್‍ನಿಲ್ದಾಣಕ್ಕೆ ಬಂದು ಪುನಃ ವಾಪಾಸು ಅದೇ ಮಾರ್ಗದಲ್ಲಿ ಸಂಚರಿಸುವುದು.
ಮದ್ಯದ ಅಂಗಡಿ ಬಂದ್; ವಿಸರ್ಜನಾ ಮೆರವಣಿಗೆ ಪ್ರಯುಕ್ತ ಸಾರ್ವಜನಿಕ ಶಾಂತಿ ಪಾಲನೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮದ ಸಲುವಾಗಿ ಅ.1ರ ಬೆಳಗ್ಗೆ 6ರಿಂದ ಅ.3ರ ಬೆಳಗ್ಗೆ 6 ರವರೆಗೆ ಚಿತ್ರದುರ್ಗ ತಾಲ್ಲೂಕಿನಾದ್ಯಂತ ಬರುವ ಎಲ್ಲಾ ಬಗೆಯ ಮದ್ಯ ಮಾರಾಟದ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.
ಕೋವಿಡ್ ಸಂಭಾವ್ಯ ಮೂರನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಿಲ್ಲ ಎಂದು ತಿಳಿಸಿದರು.
===