ಸುದ್ದಿಒನ್, ಚಿತ್ರದುರ್ಗ, ನವೆಂಬರ್.17 : ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ವಿಚಾರದಲ್ಲಿ ನಡೆದ ಅಕ್ರಮ ಇಡೀ ರಾಜ್ಯದಲ್ಲಿಯೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದರಲ್ಲೂ ವರ್ಷಾನುಗಟ್ಟಲೇ ಕಷ್ಟಪಟ್ಟು ಓದಿದ್ದ ವಿದ್ಯಾರ್ಥಿಗಳು ಅಕ್ರಮಕ್ಕೆ ಬಲಿಯಾಗಿ ಕಣ್ಣೀರು ಹಾಕಿದ್ದರು. ಯಾರೋ ಒಂದಷ್ಟು ಜನ ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಬೇಡ ಅಂತಾನೇ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಮರುಪರೀಕ್ಷೆಗೆ ಆದೇಶಿಸಲಾಗಿದೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದು, ಪಿಎಸ್ಐ ಪರೀಕ್ಷೆಯಲ್ಲಿ ಗೊಂದಲ ಉಂಟಾಗಿದ್ದು ಮರು ಪರೀಕ್ಷೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆ ಖಾಲಿ ಇದ್ದು ಭರ್ತಿ ಮಾಡುವ ಚಿಂತನೆ ನಡೆದಿದೆ ಎಂದರು. ಪಿ ಎಸ್ ಐ ಪರೀಕ್ಷಾ ಹಗರಣದಿಂದ ಗೊಂದಲ ಉಂಟಾಗಿದ್ದು ಮರುಪರೀಕ್ಷೆಗೆ ಈಗಾಗಲೇ ಸಿದ್ದತೆ ನಡೆದಿದೆ. ಒಟ್ಟು 1000 ಪಿ ಎಸ್ ಐ ಹುದ್ದೆಗಳನ್ನು ಹಂತ ಹಂತವಾಗಿ ನೇಮಕ ಮಾಡಲು ಸರ್ಕಾರ ಸಿದ್ದವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಖಾಲಿಯಿರುವ ಪೊಲೀಸ್ ಹುದ್ದೆಗಳಿಗೆ ಸಂಬಂಧಿಸಿದಂತೆ 3000 ಸಾವಿರ ಪೊಲೀಸ್ ಪೇದೆ ಹುದ್ದೆಗೆ ನೇಮಕಾತಿಗೆ ತಯಾರಿ ನಡೆಸುತ್ತಿದ್ದೇವೆ. DCRE ಸೆಲ್ ಗಳಿಗೆ ನಾವು ದೂರು ಸ್ವೀಕರಿಸಲು ಅಧಿಕಾರ ನೀಡಿದ್ದೇವೆ ಎಂದರು.