ಚಿತ್ರದುರ್ಗ, (ಜು.28): ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾದ ಮೇಲೆ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ರಾಜೀನಾಮೆಯ ಹಾದಿ ಹಿಡಿದಿದ್ದಾರೆ. ಇದೀಗ ಕೋಟೆ ನಾಡು ಚಿತ್ರದುರ್ಗದಲ್ಲಿ ರಾಜೀನಾಮೆ ಪರ್ವ ಮುಂದುವರೆದಿದ್ದು, ತಾಲೂಕು ಮಂಡಲಗಳ 9 ಜನ ಅಧ್ಯಕ್ಷರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಜೊತೆಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಹಿರಿಯೂರು ತಾಲೂಕು ಮಂಡಲ ಅಧ್ಯಕ್ಷ ಎಂ. ವಿಶ್ವನಾಥ್, ಚಳ್ಳಕೆರೆ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ನಾಯಕನಹಟ್ಟಿ ಅಧ್ಯಕ್ಷ ರಾಮರೆಡ್ಡಿ, ಮೊಳಕಾಲ್ಮೂರು ಮಂಡಲ ಅಧ್ಯಕ್ಷ ಡಾ. ಮಂಜುನಾಥ್ ಪಿಎಂ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ಭರಮಸಾಗರ ಅಧ್ಯಕ್ಷ ಶೈಲೇಂದ್ರ, ಹೊಸದುರ್ಗ ಮಂಡಲ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಚಿತ್ರದುರ್ಗ ನಗರ ಅಧ್ಯಕ್ಷ ನವೀನ್ ಚಾಲುಕ್ಯ ಚಿತ್ರದುರ್ಗ ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್,ಇವರುಗಳು ಜಿಲ್ಲಾಧ್ಯಕ್ಷ ಎ. ಮುರುಳಿ ಅವರನ್ನು ಭೇಟಿ ಮಾಡಿ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ. ಮೊಳಕಾಲ್ಮೂರಿನ ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ್ ಸೇರಿದಂತೆ ಜೊತೆಗೆ ವಿವಿಧ ಯುವ ಮೋರ್ಚಾ ಪದಾಧಿಕಾರಿಗಳು ಕೂಡ ರಾಜೀನಾಮೆ ನೀಡಿದ್ದಾರೆ.
ಪತ್ರದ ಮೂಲಕ ತೀವ್ರ ಬೇಸರ ವ್ಯಕ್ತಪಡುದ್ದು, ಒಂದು ದಿನದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಜಿಹಾದಿ ಮಾನಸಿಕತೆಯ ದುರುಳರು ಹತ್ಯೆ ಮಾಡಿರೋದು ಘೋರ ಮತ್ತು ದುಃಖಕರ. ನಮ್ಮ ಸ್ವಂತ ತಮ್ಮನನ್ನು ಕಳೆದುಕೊಂಡಷ್ಟು ಮನಸ್ಸಿಗೆ ನೋವಾಗಿದೆ. ಭಾರತೀಯ ಜನತಾ ಪಾರ್ಟಿ ಕೇವಲ ರಾಜಕೀಯ ಪಕ್ಷವಷ್ಟೇ ಅಲ್ಲ ಇದೊಂದು ವಿಚಾರ ಸಂಘಟನೆ. ಇದರ ಸಿದ್ದಾಂತ ವಿಚಾರದ ನಿಲುವಿಗಾಗಿ ಅದೆಷ್ಟೋ ನಮ್ಮ ಕಾರ್ಯಕರ್ತರು ಬಲಿದಾನವಾಗಿದೆ. ಅಂತಹ ಸಾಹಸ್ರಾರು ಕಾರ್ಯಕರ್ತರು ತ್ಯಾಗ ಬಲಿದಾನದ ಫಲವಾಗಿ ಇಂದು ಪಂಚಾಯಿತಿಯಿಂದ ಪಾರ್ಲಿಮೆಂಟ್ ಅವರಗೂ ನಮ್ಮಗಳ ಸರ್ಕಾರ ಆಳ್ವಿಕೆಯಲ್ಲಿದೆ. ಅಲ್ಲೂ ಇಲ್ಲೂ ಎಲ್ಲಲ್ಲೋ ನಮ್ಮಗಳದೇ ಸರ್ಕಾರ ಇರುವಾಗಲೂ ಜಿಹಾದಿ ಮಾನಸಿಕತೆಯ ಭಯೋತ್ಪಾದಕರಿಗೆ ನಮ್ಮ ಮುಗ್ಧ ಕಾರ್ಯಕರ್ತರು ಬಲಿಯಾಗುತ್ತಿರುವ ಸರಣಿ ಮುಂದುವರೆದಿದೆ. ಮುಖ್ಯಮಂತ್ರಿಗಳು, ಗೃಹ ಸಚಿವರು ಕಠಿಣ ಕ್ರಮ, ನಿರ್ದಾಕ್ಷಿಣ್ಯ ಕ್ರಮ ಎಂದು ಅಸಮರ್ಥರಾಗಿ ಹೇಳಿಕೆ ನೀಡುತ್ತಿದ್ದಾರೆ.
ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಆಹರ್ನಿಕ ಕಾರ್ಯಕರ್ತ ನಮಗೆ ಬೆಲೆ ಕಟ್ಟಲಾಗದ ಜೀವ. ಆ ಜೀವಕ್ಕೆ ಬೆಲೆ ಇಲ್ಲದಂತಾಗಿರುವುದು ದುರಂತವೇ ಸರಿ ಈ ಹಿಂದೆ ನಡೆದ ನಮ್ಮ ಕಾರ್ಯಕರ್ತರುಗಳ ಹತ್ಯೆಗಳಿಗೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎಂಬುದು ನಮ್ಮ ಮುಂದೆ ಕಣ್ಮುಂದೆ ಇರುವ ಸಂಗತಿ. ಮುಖ್ಯಮಂತ್ರಿಗಳು, ಗೃಹ ಸಚಿವರು ಕಠಿಣ ಕ್ರಮ, ನಿರ್ದಾಕ್ಷಿಣ್ಯ ಕ್ರಮ ಕೇವಲ ಭರವ ಭರವಸೆಯಾಗೇ ಉಳಿದ ಕಾರಣ ಚಿತ್ರದುರ್ಗ ಜಿಲ್ಲೆಯ ನಾವು 9 ಮಂಡಲದ ಅಧ್ಯಕ್ಷರುಗಳು ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ ನಮ್ಮಗಳ ಈ ನಿರ್ಧಾರದಿಂದ ಸರ್ಕಾರ ಎಚ್ಚೆತ್ತುಕೊಳ್ಳಲಿ. ಎಚ್ಚೆತ್ತು ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣ ಆದವರ ಎಡೆಮುರಿ ಕಟ್ಟಲಿ. ಎಂದು ಪ್ರತ್ರದಲ್ಲಿ ಉಲ್ಲೇಖಿಸಿ ಎಲ್ಲರು ಸಹಿ ಹಾಕಿ ಜಿಲ್ಲಾಧ್ಯಕ್ಷರಿಗೆ ನೀಡಿದ್ದಾರೆ.