ಮೈಸೂರು: ಇಲ್ಲಿನ ರಾಜಕುಮಾರಿ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡಬೇಕೆಂದು ಮಹಾನಗರ ಪಾಲಿಕೆ ನಿರ್ಧಾರ ಮಾಡಿತ್ತು. ಈ ವಿಚಾರಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ರಾಜವಂಶಸ್ಥರಾದ ಯದುವೀರ್ ಅವರು ಪಾಲಿಕೆಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅವರದ್ದೇ ಪಕ್ಷದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಅವರ ಹೆಸರಿಡಲಿ ಎಂದಿದ್ದರು.
ಸಿದ್ದರಾಮಯ್ಯ ಅವರ ಹೆಸರಿಟ್ಟರೆ ತಪ್ಪೇನು ಎಂದಿದ್ದರು. ಅವರ ಹೇಳಿಕೆಗೆ ಒಡೆಯರದ ಅವರು ವಿರೋಧ ವ್ಯಕ್ತಪಡಿಸಿ, ಪ್ರತಾಪ್ ಸಿಂಹರಿಗೆ ಇತಿಹಾಸ ತಿಳಿದಿಲ್ಲ. ಪ್ರಿನ್ಸೆಸ್ ರಸ್ತೆಯ ಇತಿಹಾಸ ತಿಳಿಸಿದ ಮೇಲೆ ಅವರಿಗೆ ಗೊತ್ತಾಗಲಿದೆ ಎಂದಿದ್ದರು. ಈಗ ಮತ್ತೆ ಸಿದ್ದರಾಮಯ್ಯ ಅವರ ಪರವೇ ಪ್ರತಾಪ್ ಸಿಂಹ ಮಾತನಾಡಿದ್ದಾರೆ. ಪ್ರಿನ್ಸೆಸ್ ರಸ್ತೆ ಅಂತ ದಾಖಲೆ ಇದ್ದರೆ ಬದಲಾವಣೆ ಬೇಡ. ಸಿದ್ದರಾಮಯ್ಯ ಅವರ ಹೆಸರನ್ನು ಬೇರೆ ರಸ್ತೆಗೆ ಇಡಲಿ. ನಾನು ಕಾಂಗ್ರೆಸ್ ಶಾಸಕ ಹರೀಶ್ ಗೌಡಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಒಂದೊಮ್ಮೆ ಪ್ರಿನ್ಸೆಸ್ ರಸ್ತೆ ಎಂದು ಕರೆಯುವುದಕ್ಕೆ ದಾಖಲೆ ಇದ್ದರೆ ಬದಲಾವಣೆ ಬೇಡ. ಹೊಸ ಬಡಾವಣೆ ಮಾಡಿ ಸಿದ್ದರಾಮಯ್ಯ ಅವರ ಹೆಸರಿಡಲಿ. ಇದನ್ನು ಇಲ್ಲಿಗೆ ನಿಲ್ಲಿಸೋಣ. ನಾನು ಕಾರ್ಪೋರೇಷನ್ ನಲ್ಲಿ ಕೇಳಿದಾಗ ಆ ರಸ್ತೆಗೆ ಹೆಸರಿಲ್ಲ ಎಂದಿದ್ದರು. ಹಾಗಾಗಿ ಸಿದ್ದರಾಮಯ್ಯ ಹೆಸರಿಡಲಿ ಬಿಡಿ ಎಂದಿದ್ದೆ. ಮೈಸೂರಿಗೆ ಸಿದ್ದರಾಮಯ್ಯ ಅವರ ಕೊಡುಗೆ ಸಾಕಷ್ಟಿದೆ. ಸಿದ್ದರಾಮಯ್ಯ ಹೆಸರಿಡಿ ಎಂದಾಕ್ಷಣ ನಾನು ಸಿದ್ದರಾಮಯ್ಯ ಪರ ಅಲ್ಲ. ಕಾಂಗ್ರೆಸ್ ಕೂಡ ಸೇರಲ್ಲ. ನಾನು ಬದ್ಧತೆ ಇರುವ ವ್ಯಕ್ತಿ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.