ಮೈಸೂರು: ಟಿಪ್ಪು ಸುಲ್ತಾನ್ ಬಂದಾಗಲೇ ತಲೆ ಕೆಡಿಸಿಕೊಂಡಿಲ್ಲ. ಇನ್ನು ಸಿದ್ದು ಸುಲ್ತಾನ್ ಬಂದಾಗ ತಲೆ ಕಿಡಿಸಿಕೊಳ್ಳುತ್ತೀವಾ ಎಂದು ಸಿದ್ದರಾಮಯ್ಯ ಅವರಿಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಕೊಡಗಿಗೆ ನೆರೆ ಭೇಟಿಗೆ ಭೇಟಿ ನೀಡಿದಾಗ ಸಿದ್ದರಾಮಯ್ಯ ಅವರು ಇದ್ದ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಈ ಘಟನೆಯನ್ನು ವಿರೋಧಿಸಿ, ಕಾಂಗ್ರೆಸ್ ಮಡಿಕೇರಿ ಚಲೋ ಯೋಜನೆ ಮಾಡಿದ್ದು, ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮಾನ್ಯ ಸಿದ್ದರಾಮಯ್ಯನವರೆ, ನಿಮ್ಮ ಕಾರಿನ ಮೇಲೆ ಮೊಟ್ಟೆ ಎಸೆದ ದಿನವೇ ನಮ್ಮ ಯಡಿಯೂರಪ್ಪನವರು, ಸಿಎಂ ಬೊಮ್ಮಾಯಿ ಅವರು ಆ ರೀತಿಯಾಗಿ ಮಾಡಬಾರದು, ತಪ್ಪು, ಅಕ್ಷಮ್ಯ ಅಪರಾಧವೆಂದು ಕ್ಷಮೆಯಾಚನೆ ಮಾಡಿದ್ದಾರೆ. ನಾವೂ ಕೂಡ ಕ್ಷಮೆಯಾಚನೆ ಮಾಡಿದ್ದೇವೆ. ಇಷ್ಟಾದರೂ ಕೂಡ 26ನೇ ತಾರೀಖು ಪಾದಯಾತ್ರೆ ಬರ್ತೀವಿ ಅಂದರೆ ಪಾದಯಾತ್ರೆ ಆದರೂ ಬನ್ನಿ, ದಂಡಯಾತ್ರೆಯಾದರೂ ಬನ್ನಿ. ಮಂಡ್ಯ, ಮೈಸೂರು ಭಾಗದಿಂದ ಕರೆದುಕೊಂಡು ಬರುತ್ತೀವಿ ಅಂದರಲ್ಲ ಅಷ್ಟೇ ಅಲ್ಲ ಪಕ್ಕದ ರಾಜ್ಯ ಕೇರಳದಲ್ಲಿ ನಿಮ್ಮ ಸಾಕು ಮಕ್ಕಳಾದ ಎಸ್ಡಿಪಿಐ ಅವರಿದ್ದಾರೆ ಅವರನ್ನು ಕರೆದುಕೊಂಡು ಬನ್ನಿ.
ನಾಲ್ಕು ದಿಕ್ಕುಗಳಿಂದ ಬೇಕಾದರೂ ಬನ್ನಿ. ಆ ಟಿಪ್ಪು ಸುಲ್ತಾನ್ ದಂಡೆತ್ತಿ ಬಂದಾಗಲೇ ಕೊಡಗಿನವರು ತಲೆ ಕೆಡಿಸಿಕೊಂಡಿಲ್ಲ. ಇನ್ನು ಸಿದ್ದು ಸುಲ್ತಾನ್ ಬಂದಾಗ ತಲೆ ಕೆಡಿಸಿಕೊಳ್ಳುತ್ತೀವಿ ಅಂತ ದಯವಿಟ್ಟು ಅಂದುಕೊಳ್ಳಬೇಡಿ. ನಿಮಗೆ ಕ್ಯಾರೆ ಅಂತ ಕೂಡ ಅನ್ನಲ್ಲ. ನಮಗೆ ಮಂಡ್ಯದಿಂದ, ಹಾಸನದಿಂದ, ಚಾಮರಾಜನಗರದಿಂದ, ಕೇರಳದಿಂದ ಕಲ್ಲು ಬಿಸಾಡುವ ರನ್ನು ಕರೆತರುವ ಅಗತ್ಯವಿಲ್ಲ. ಕೊಡಗಿನವರು ವೀರರು. ಇವತ್ತು ಕೂಡ ದೇಶಸೇವೆ ಮಾಡುತ್ತಿರುವವರು ಅಲ್ಲಿದ್ದಾರೆ. ಅಸಂಖ್ಯಾತ ಸೈನಿಕರನ್ನು ಕೊಡಗು ಕೊಟ್ಟಿದೆ. ನಮಗೆ ಎಲ್ಲಿಂದಲೋ ಜನ ಕರೆದುಕೊಂಡು ಬರುವ ಅಗತ್ಯವಿಲ್ಲ. ಕೊಡಗಿನ ಜನರೇ ಅಂದು ನಿಮಗೆ ಉತ್ತರ ಕೊಡುತ್ತಾರೆ ಎಂದಿದ್ದಾರೆ.