ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಘಟನೆಯ ನಂತರದ ಬೆಳವಣಿಗೆಗಳ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದು, ಪೊಲೀಸರ ಕಾರ್ಯವೈಖರಿ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಂರಿಗೆ ನಮಾಜ್ ಮಾಡಲು ಅವಕಾಶ ಕೊಡುತ್ತೀರಿ. ಆದರೆ ಹಿಂದೂಗಳ ಪ್ರಾರ್ಥನೆ, ಮೆರವಣಿಗೆಗೆ ಅವಕಾಶ ನೀಡದೇ ನಿರ್ಬಂಧ ಹೇರುತ್ತಿದೀರಿ. ಯಾಕೆ ಇಂತಹ ಕ್ರಮ ಕೈಗೊಳ್ಳುತ್ತಿದ್ದೀರಿ? ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಮಸೀದಿಯೊಂದರಲ್ಲಿ 200 ಜನ ಸೇರಿದ್ದರೂ, ಅಲ್ಲಿ ಮಾರಕಾಸ್ತ್ರಗಳು ಸಂಗ್ರಹವಾಗಿವೆ ಎಂಬ ಮಾಧ್ಯಮ ವರದಿಗಳಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮತಾಂಧ ಇಸ್ಲಾಮಿಕ್ ಶಕ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರಿದ್ದಾರೆ.ಬಾಗಲಕೋಟೆಯಲ್ಲಿ 200 ಜನರು ಸೇರಿದ್ದರು. ಅಲ್ಲಿಯವರೆಗೆ ಪೊಲೀಸರು ಯಾಕೆ ಸುಮ್ಮನಿದ್ದರು? ಅವರು ಚಪ್ಪಲಿ, ಕಲ್ಲು ಸಂಗ್ರಹಿಸುವಾಗ ನೀವು ಏನು ಮಾಡುತ್ತಿದ್ದೀರಿ? ಕಾಂಗ್ರೆಸ್ ನವರು ವೋಟ್ ಬ್ಯಾಂಕ್ ಸಲುವಾಗಿ ತಮಗೆ ಬೇಕಾದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.






