ಬೆಂಗಳೂರು: ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋಗಳು ಹಾಸನದ ಹಾದಿ ಬೀದಿಯಲ್ಲಿ ಚೆಲ್ಲಾಡಿವೆ. ಈ ವಿಚಾರ ಬೆಳಕಿಗೆ ಬಂದ ಕೂಡಲೇ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿದೆ. ಇದರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಊರು ಬಿಟ್ಟು ಜರ್ಮನಿ ಸೇರಿದ್ದಾರೆ. ಆದರೆ ಇಂದು ಟಿಕೆಟ್ ಬುಕ್ಕಿಂಗ್ ಆಗಿತ್ತು. ಮಧ್ಯರಾತ್ರಿ ಬರುತ್ತಾರೆ ಎಂಬ ಮಾಹಿತಿಯು ಲಭ್ಯವಾಗಿತ್ತು. ಆದರೆ ಅವರ ವಾಪಾಸ್ ಪ್ರಯಾಣ ಕ್ಯಾನ್ಸಲ್ ಆಗಿದೆ.
ಈ ಸಂಬಂಧ ಮಾತನಾಡಿರುವ ಗೃಹ ಸಚಿವ ಜಿ ಪರಮೇಶ್ವರ್, ಈ ಪ್ರಕರಣ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಇದು ಬಹಳ ಗಂಭೀರವಾದಂತ ವಿಚಾರ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಪ್ಪಿಸಿಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ಸಂತ್ರಸ್ತೆಯಿಂದ ದೂರು ಬಂದ ಕೂಡಲೇ ಎಸ್ಐಟಿ ತನಿಖೆಗೆ ಒಪ್ಪಿಸಲಾಗಿದೆ.
ಪ್ರಜ್ವಲ್ ರೇವಣ್ಣ ಅವರು ರಾತ್ರೋ ರಾತ್ರಿ ವಿದೇಶಕ್ಕೆ ಹೋಗಿದ್ದಾರೆ. ಸೆಕ್ಷನ್ 41(A) ಪ್ರಕಾರ ನೋಟೀಸ್ ನೀಡಿದ್ದು, 24 ಗಂಟೆ ಒಳಗಡೆ ವಿಚಾರಣೆಗೆ ಬರಬೇಕಾಗುತ್ತದೆ. ಅವರು ಬರದೆ ಹೋದರೆ ಕಾನೂನು ಪ್ರಕಾರ ಅರೆಸ್ಟ್ ಮಾಡಬೇಕಾಗುತ್ತದೆ. ಪ್ರಜ್ವಲ್ ರೇವಣ್ಣ ಅವರಿಗೆ ಲುಕ್ ಔಟ್ ನೋಟೀಸ್ ಕೂಡ ನೀಡಲಾಗಿದೆ. ಸಂತ್ರಸ್ತ ಮಹಿಳೆಯರ ಹೇಳಿಕೆಗಳನ್ನು ರೆಕಾರ್ಡ್ ಕೂಡ ಮಾಡಲಾಗಿದೆ. ನಿನ್ನೆ ಇನ್ನೊಬ್ಬ ಮಹಿಳೆ ಕೂಡ ದೂರು ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆಯರಿಗೆ ಸರ್ಕಾರ ರಕ್ಷಣೆ ಕೊಡುತ್ತದೆ. ಇದರಲ್ಲಿ ಮಹಿಳೆಯರ ಭವಿಷ್ಯ, ಅವರ ಕುಟುಂಬದ ಭವಿಷ್ಯ ಅಡಗಿದೆ. ಹೀಗಾಗಿ ಸರ್ಕಾರ ಈ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ ಎಂದಿದ್ದಾರೆ.