ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಫೆ.08): ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವುದಕ್ಕಾಗಿ ಪ್ರಜಾಧ್ವನಿ ಯಾತ್ರೆ ರಾಜ್ಯದ 224 ಕ್ಷೇತ್ರಗಳಿಗೂ ಸಂಚರಿಸುತ್ತಿದೆ ಎಂದು ಕೆ.ಪಿ.ಸಿ.ಸಿ.ಕಾರ್ಯದರ್ಶಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪ್ರಬಲಾಕಾಂಕ್ಷಿ ಹನುಮಲಿ ಷಣ್ಮುಖಪ್ಪ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಒಂದು ತಂಡ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಮತ್ತೊಂದು ತಂಡದ ಪ್ರಜಾಧ್ವನಿ ಯಾತ್ರೆ ರಾಜ್ಯಾದ್ಯಂತ ಸುತ್ತಾಡುತ್ತಿದೆ.
ಗುರುವಾರ ಬೆಳಿಗ್ಗೆ ಹನ್ನೊಂದಕ್ಕೆ ಹೊಸದುರ್ಗಕ್ಕೆ ಆಗಮಿಸಲಿರುವ ಡಿ.ಕೆ.ಶಿವಕುಮಾರ್ ತಂಡ ಮಧ್ಯಾಹ್ನ ಎರಡು ಗಂಟೆಗೆ ಹೊಳಲ್ಕೆರೆಗೆ ಆಗಮಿಸಲಿದೆ. ಸಂಜೆ ಐದು ಗಂಟೆಗೆ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಬಹಿರಂಗ ಸಭೆ ನಡೆಯಲಿದೆ. ಕಾರ್ಯಕರ್ತರು ಸೇರಿದಂತೆ ಹತ್ತು ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಕೆ.ಪಿ.ಸಿ.ಸಿ. ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಬಿ.ಕೆ.ಹರಿಪ್ರಸಾದ್, ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ, ಸಲೀಂ ಅಹಮದ್, ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ ಸೇರಿದಂತೆ ಅನೇಕ ಮುಖಂಡರುಗಳು ಆಗಮಿಸಲಿದ್ದಾರೆ.
ಪ್ರತಿಯೊಬ್ಬ ಮತದಾರರು ಹಾಗೂ ಕೆಳಮಟ್ಟದ ಕಾರ್ಯಕರ್ತರ ಬಳಿ ಹೋಗುತ್ತೇವೆ. ಯಾವುದೇ ಒಂದು ಜನಾಂಗದಿಂದ ಚುನಾವಣೆ ನಡೆಸುವುದು ಕಷ್ಟ. 2018 ರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡೆ ಎಂದು ಬೇಸರಪಟ್ಟುಕೊಳ್ಳದೆ ಅಂದಿನಿಂದ ಇಲ್ಲಿಯತನಕ ಪಕ್ಷದ ಎಲ್ಲಾ ಕೆಲಸಗಳಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿದ್ದೇನೆ. ಈ ಬಾರಿಯ ವಿಧಾನಸಭೆ ಚುನಾವಣೆಗೂ ಆಕಾಂಕ್ಷಿಯಾಗಿದ್ದೇನೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದ ತಂಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದೆ. ಪಕ್ಷದ ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ನಾಗರಾಜ್ ಜಾನ್ಹವಿ, ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ಮಹಡಿ ಶಿವಮೂರ್ತಿ, ಟಿ.ಟಿ.ಸೆಲ್‍ನ ಪ್ರಕಾಶ್ ರಾಮನಾಯ್ಕ, ಕೆ.ಪಿ.ಸಿ.ಸಿ. ಕೋಆರ್ಡಿನೇಟರ್ ಅನಿಲ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.