ಹೊಳಲ್ಕೆರೆ, (ಫೆ.8) : ಪಟ್ಟಣದಲ್ಲಿ ಫೆ.9ರಂದು ಪ್ರಜಾಧ್ವನಿ ಯಾತ್ರೆ ಆಗಮಿಸಲಿದ್ದು, ಅಂದು ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಪ್ರಜೆಗಳ ಧ್ವನಿ ಮೊಳಗಲಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.
ಪಟ್ಡಣದಲ್ಲಿ ಸಮಾವೇಶದ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ಸಂದರ್ಭ ಮಾತನಾಡಿದರು.
ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಚರಿಸುತ್ತಿರುವ ಪ್ರಜಾಧ್ವನಿ ಯಾತ್ರೆ ಬಿಜೆಪಿಗರಲ್ಲಿ ನಡುಕು ಉಂಟು ಮಾಡಿದೆ ಎಂದರು.
ಗುತ್ತಿಗೆದಾರರು, ಬಿಜೆಪಿ ಶಾಸಕರೇ ಸರ್ಕಾರಕ್ಕೆ ಪತ್ರ ಬರೆದು ಕಾಮಗಾರಿ, ಟೆಂಡರ್ ಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳುತ್ತಿದ್ದಾರೆ. ಇದರಿಂದ 40 ಪರ್ಸೆಂಟೇಜ್ ಸರ್ಕಾರ ಎಂಬುದು ಬಹಿರಂಗ ಸತ್ಯ ಎಂದು ಹೇಳಿದರು.
ಸಿಲಿಂಡರ್, ಅಡುಗೆ ಎಣ್ಣೆ, ಬೇಳೆಕಾಳುಗಳ ಬೆಲೆ ಗಗನಕ್ಕೆ ಏರಿದೆ. ಸಾಮಾನ್ಯ ಜನರ ಬದುಕು ಮೂರಾಬಟ್ಟೆ ಆಗಿದೆ. ಆದರೂ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಗೆ ಕಡಿವಾಣ ಹಾಕಲು ಡಬಲ್ ಇಂಜಿನ್ ಸರ್ಕಾರ ಮುಂದಾಗುತ್ತಿಲ್ಲ ಎಂದು ದೂರಿದರು.
ಭ್ರಷ್ಟಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿರುವ ಜನ ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಪಕ್ಷದ ಪರ ಎಲ್ಲೆಡೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತವನ್ನು ಸ್ಮರಿಸುತ್ತಿದ್ದಾರೆ ಎಂದರು.
ಭಾರತ್ ಜೋಡೋ, ನಾ ನಾಯಕಿ, ಈಗ ಪ್ರಜಾಧ್ವನಿ ಯಾತ್ರೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎಂದು ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ಬದುಕುವ ಭರವಸೆ ಕಳೆದುಕೊಂಡಿದ್ದ ಜನರಿಗೆ ಕಾಂಗ್ರೆಸ್ ಪಕ್ಷ ಘೋಷಿಸಿರುವ ಪ್ರತಿ ಮನೆಯ ಒಬ್ಬ ಮಹಿಳೆಗೆ ಎರಡು ಸಾವಿರ ರೂಪಾಯಿ ನೀಡಿವ ಗರಹಲಕ್ಷ್ಮಿ, ಪ್ರತಿ ಮನೆಗೆ ಉಚಿತವಾಗಿ ಪ್ರತಿ ತಿಂಗಳು 200 ಯೂನಿಟ್ ವಿದ್ಯತ್ ನೀಡುವ ಗೃಹಜ್ಯೋತಿ ಆಶಾಭಾವನೆ ಮೂಡಿಸಿದೆ ಎಂದರು.
ರೈತರ ಸಾಲಮನ್ನ ವಿರುದ್ಧ ಮಾತನಾಡುವ ತೇಜಸ್ವಿ ಸೂರ್ಯ ಅಂತಹವರನ್ನು ಹೊಂದಿರುವ ಬಿಜೆಪಿ ಪಕ್ಷಕ್ಕೆ ಜನರ ಕಾಳಜಿ ಇಲ್ಲ. ಶ್ರೀಮಂತರನ್ನು ಶ್ರೀಮಂತರನ್ನಾಗಿಸುವ ಏಕೈಕ ಗುರಿ ಹೊಂದಿರುವ ಬಿಜೆಪಿ ಸರ್ಕಾರ ಬಡವರ ಸಮಾಧಿ ಮೇಲೆ ಉಳ್ಳವರಿಗಾಗಿ ಯೋಜನೆ ರೂಪಿಸುತ್ತಿದೆ. ಲಕ್ಷಾಂತರ ಕೋಟಿ ರೂಪಾಯಿ ವಂಚನೆ ಮಾಡಿರುವ ಮಲ್ಯ ಸೇರಿದಂತೆ ಅನೇಕರು ದೇಶ ತೊರೆಯಲು ಅವಕಾಶ ಮಾಡಿಕೊಟ್ಟ ಬಿಜೆಪಿಗೆ ಇನ್ನೂ ಸಮಾಧಾನ ಇಲ್ಲ.ಈಗ ಅದಾನಿ ಮೂಲಕ ದೇಶದ ಜನರ ಶ್ರಮದ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡ ಜನರಿಗಾಗಿ ಕಾಂಗ್ರೇಸ್ ಸರ್ಕಾರ ಜಾರಿಗೊಳಿಸಿದ್ದ ಇಂದಿರಾ ಕ್ಯಾಂಟಿನ್, ಅನ್ನಭಾಗ್ಯ, ವಿದ್ಯಾ ಸಿರಿ ಸೇರಿದಂತೆ ಅನೇಕ ಯೋಜನೆಗಳು ಫಲಾನುವಿಗಳಿಗೆ ದೊರೆಯದಂತೆ ಮಾಡಿದೆ ಎಂದು ದೂರಿದರು.
ಇಂತಹ ಸರ್ಕಾರವನ್ನು ಕಿತ್ತು ಹಾಕಿ, ಜನಪರ ಕಾಂಗ್ರೆಸ್ ವನ್ನು ಅಧಿಕಾರಕ್ಕೆ ತರಲು ಜನ ಕಾತರರಾಗಿದ್ದು, ಪ್ರಜಾಧ್ವನಿ ಯಾತ್ರೆ ಬಲ ನೀಡುತ್ತಿದೆ ಎಂದರು.
ಯಾತ್ರೆಯ ರೂವಾರಿ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಸಲೀಂ ಅಹ್ಮದ್, ಡಾ.ಎಚ್.ಸಿ.ಮಹಾದೇವಪ್ಪ ಸೇರಿದಂತೆ ಅನೇಕ ನಾಯಕರ ನೇತೃತ್ವದ ಯಾತ್ರೆ ಗುರುವಾರ ಮಧ್ಯಾಹ್ನ 2 ಗಂಟೆಗೆ ಹೊಳಲ್ಕೆರೆ ಪಟ್ಟಣಕ್ಕೆ ಆಗಮಿಸಲಿದೆ. ಸಮಾವೇಶಕ್ಕೆ ಸಹಸ್ರಾರು ಸಂಖ್ಯೆಯಲ್ಕಿ ಕಾರ್ಯಕರ್ತರು, ಜನರು ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಗಳ ಸಂಖ್ಯೆಯಲ್ಲಿ ಪಕ್ಷದ ಗೆಲುವಿಗೆ ಬುನಾದಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.