ಜೀವನ ಮೌಲ್ಯಗಳನ್ನು ಕಲಿಯಲು ಮಹಾನ್ ಗ್ರಂಥಗಳ ಅಭ್ಯಾಸ ಅಗತ್ಯ : ಹೆಚ್.ಮಂಜುನಾಥ್

ಚಿತ್ರದುರ್ಗ, (ನ.09) : ಜೀವನ ಮೌಲ್ಯಗಳನ್ನು ಕಲಿಯಲು ಮಹಾನ್ ಗ್ರಂಥಗಳ ಅಭ್ಯಾಸ ಅಗತ್ಯ ಎಂದು ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಜಂಟಿ ನಿರ್ದೇಶಕ ಮತ್ತು ಪ್ರಾಚಾರ್ಯ ಹೆಚ್.ಮಂಜುನಾಥ್ ಹೇಳಿದ್ದಾರೆ.

ಬುಧವಾರ ಸಿಟಿಇ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ರಾಜ್ಯೋತ್ಸವ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳಗನ್ನಡದ ಕೃತಿಗಳು ಮೂಲಭೂತ ಸಾಹಿತ್ಯ ಪ್ರಕಾರಗಳಾಗಿವೆ. ಇವುಗಳನ್ನು ಅಧ್ಯಯನ ಮಾಡದೇ ಇದ್ದರೆ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಸಾಹಿತ್ಯ ಪ್ರಕಾರಗಳಲ್ಲಿ ಮಹಾನ್ ಕಾವ್ಯಗಳಿಗೆ ವಿಶೇಷ ಸ್ಥಾನವಿದೆ.

ರಾಮಾಯಣ ಮತ್ತು ಮಹಾಭಾರತಗಳು ಇಲ್ಲಿನ ಸಂಸ್ಕøತಿ ಹಾಗೂ ಸಾಹಿತ್ಯದ ಪ್ರತೀಕಗಳಾಗಿವೆ. ರನ್ನ,ಪಂಪ, ಜನ್ನ ಇವರುಗಳು ಕನ್ನಡ ಸಾಹಿತ್ಯದ ಮೇರು ಕೃತಿಗಾರರಾಗಿದ್ದಾರೆ. ಅವರು ಕೃತಿಗಳಲ್ಲಿನ ಮೌಲ್ಯ, ಸಂಸ್ಕøತಿಗಳನ್ನು ಅರ್ಥಮಾಡಿಕೊಳ್ಳಲು ದೊಡ್ಡ ಪ್ರಮಾಣದ ತಾಳ್ಮೆ ಹಾಗೂ ಸಾಹಿತ್ಯ ಪ್ರೀತಿ ಅವಶ್ಯಕ. ಇಂಥಹ ಬೃಹತ್ ಕೃತಿಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

ಕನ್ನಡದಲ್ಲಿರುವ ಶ್ರೇಷ್ಠ ಕೃತಿಗಳು ಓದಿ ಹೆಮ್ಮೆ ಪಡಬೇಕು. ಇವುಗಳು ರಾಜ್ಯದ ಸಾಹಿತ್ಯದ ಅಮೂಲ್ಯ ಆಸ್ತಿಗಳಾಗಿವೆ. ಇವುಗಳನ್ನು ಓದುವುದು, ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಳಗನ್ನಡದ ಶ್ರೇಷ್ಠ ಕೃತಿಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಪ್ರಪಂಚದ ಸಾಹಿತ್ಯದಲ್ಲಿ ನಮ್ಮ ದೇಶದ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಸರ್ವಶ್ರೇಷ್ಠ ಮಹಾಕಾವ್ಯಗಳಾಗಿವೆ. ಸರ್ವಕಾಲೀನ ಸತ್ಯಗಳನ್ನು ಇವುಗಳಲ್ಲಿ ಪ್ರತಿಪಾದಿಸಲಾಗಿದೆ ಎಂದರು.

ಗ್ರೇಡ್ 2 ತಹಶೀಲ್ದಾರ್ ಫಾತೀಮ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದಾರೆ. ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಹೆಣ್ಣಿನ ಸ್ಥಾನ ಉತ್ತಮವಾಗಿರಲಿಲ್ಲ. ಆದರೆ ಇದೀಗ ಮಹಿಳೆಯರು ತಮ್ಮ ಅಸ್ತಿತ್ವವನ್ನು ಸರಕಾರಿ ಹಾಗೂ ಖಾಸಗಿ ರಂಗಗಳಲ್ಲಿ ತೋರಿಸಿದ್ದಾರೆ. ಮಹಿಳೆಯರು ತಮ್ಮ ಶಕ್ತಿ ಸಾಮಥ್ರ್ಯಗಳನ್ನು ಪೂರ್ಣವಾಗಿ ಬಳಸಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ರಾಕ್ ಫೋರ್ಟ್ ಶಾಲೆಯ ಪ್ರಾಚಾರ್ಯ ಸಿ.ಪಿ.ಜ್ಞಾನದೇವ್ ರನ್ನನ ಗದಾಯುದ್ಧದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ದುಯೋಧನ ನೆಲಕ್ಕಾಗಿ ಬದುಕಲಿಲ್ಲ. ಛಲಕ್ಕಾಗಿ ಬದುಕಿದ್ದ. ದುಯೋಧನ ಖಳನಾಯಕನಾಗಿರಲಿಲ್ಲ. ಆದರೆ ಅವನ ಸೇಡು, ಛಲ ಹಾಗೂ ಶೌರ್ಯಗಳನ್ನು ರನ್ನ ಅಮೋಘವಾಗಿ ವರ್ಣಿಸಿದ್ದಾನೆ. ರನ್ನನು ತನ್ನ ಕೃತಿಯನ್ನು ಎಂಟೆದೆಯುಳ್ಳ ಶ್ರೇಷ್ಠರು ಮಾತ್ರ ಪರಿಶೀಲಿಸಬಹುದು ಎಂದು ತನ್ನ ಹೆಚ್ಚುಗಾರಿಕೆಯನ್ನು ಪ್ರದರ್ಶಿಸಿದ್ದಾನೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಕನ್ನಡದ ಪದಗಳ ಬಳಕೆಯನ್ನು ಹೆಚ್ಚು ಮಾಡಬೇಕು. ಇಂದಿನ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯುವುದು ಅನಿವಾರ್ಯವಾಗಿದೆ. ಆದರೆ ಕನ್ನಡಕ್ಕೆ ಮೊದಲ ಸ್ಥಾನ ನೀಡಬೇಕು. ಬಳಕೆ ಹೆಚ್ಚಿದಂತೆ ಸಾಹಿತ್ಯದ ಬಾಳಿಕೆ ಹೆಚ್ಚಾಗುತ್ತದೆ. ಬರವಣಿಗೆ, ಮಾತು, ಪತ್ರಗಳಲ್ಲಿ ಕನ್ನಡದ ಪದಗಳನ್ನು ಹೆಚ್ಚಾಗಿ ಬಳಸಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಶಿಕ್ಷಣ ಮಹಾವಿದ್ಯಾಲಯದ ರೀಡರ್ ಶ್ರೀನಿವಾಸ ರೆಡ್ಡಿ, ಪಿ.ರಾಜಣ್ಣ, ಕಸಾಪ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಸಂಚಾಲಕ ಶ್ರೀನಿವಾಸ ಮಳಲಿ, ಸದಸ್ಯರಾದ ರೀನಾ ವೀರಭದ್ರಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!