ಚಿತ್ರದುರ್ಗ : ಉದ್ಯೋಗಿನಿ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ರುಡ್‍ಸೆಟ್‍ನಲ್ಲಿ ಇಡಿಪಿ.ತರಬೇತಿಯನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ರುಡ್‍ಸೆಟ್‍ನಲ್ಲಿ ಮಹಿಳೆಯರಿಗಾಗಿಯೇ ಅನೇಕ ತರಬೇತಿಗಳನ್ನು ನೀಡಲಾಗುತ್ತದೆ.
ಇದರ ಪ್ರಯೋಜನ ಪಡೆದುಕೊಂಡು ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಭಿಗಳಾಗಿ ಬದುಕುವಂತೆ ತಿಳಿಸಿದರು.
ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಬಾಲ್ಯ ವಿವಾಹಗಳಾಗುತ್ತಿವೆ. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎನ್ನುವುದು ಗೊತ್ತಿದ್ದರೂ ಕೆಲವು ಪೋಷಕರುಗಳು ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡುತ್ತಿರುವುದು ಸರಿಯಲ್ಲ.
ಅದಕ್ಕೆ ಬದಲಾಗಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪೋಷಕರುಗಳು ಮುಂದಾಗಬೇಕು. ಜೊತೆಗೆ ಸ್ವಸಹಾಯ ಸಂಘಗಳ ಮೂಲಕ ಸೌಲಭ್ಯಗಳನ್ನು ಪಡೆದುಕೊಂಡು ಮಹಿಳೆ ಸಬಲೀಕರಣವಾಗಬೇಕೆಂದು ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹೆಣ್ಣು ಮಕ್ಕಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವೈಶಾಲಿ, ರುಡ್‍ಸೆಟ್ ನಿರ್ದೇಶಕರಾದ ಮಂಜುಳ, ಎನ್.ಆರ್.ಎಲ್.ಎಂ.ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಯೋಗೇಶ್, ಮಹಿಳಾ ಅಭಿವೃದ್ದಿ ನಿಗಮದ ಅಭಿವೃದ್ದಿ ನಿರೀಕ್ಷಕಿ ಸುವರ್ಣಮ್ಮ, ಮಹಿಳಾ ಶಕ್ತಿ ಕೇಂದ್ರದ ಉಮ, ದಿವ್ಯರಾಣಿ, ಓಬಳೇಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.