ಇತ್ತಿಚೆಗೆ ದ್ವೇಷ ಬಿತ್ತುವ ಭಾಷಣ ಮಾಡಿದ್ದ ಆರೋಪದ ಮೇಲೆ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲಾಗಿತ್ತು. ಧಾರ್ಮಿಕವಾಗಿ ದ್ವೇಷ ಬಿತ್ತುವ ಮತ್ತು ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿಯಾದ ಭಾಷಣದ ಆರೋಪದ ಮೇಲೆ ಶ್ರೀರಂಗಪಟ್ಟಣದಲ್ಲಿ ದೂರು ದಾಖಲಿಸಲಾಗಿತ್ತು. ಈ ಎಫ್ಐಆರ್ ರದ್ದು ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆದಿದೆ.
ಹೈಕೋರ್ಟ್ ನಲ್ಲಿ ಪ್ರಭಾಕರ್ ಭಟ್ ಪರವಾಗಿ ವಾದ ಮಂಡಿಸಿದ ವಕೀಲರು, ಇದು ರಾಜಕೀಯ ಪ್ರೇರಿತ ದೂರು ಆರೋಪಿ ವಯೋವೃದ್ಧರು. ಅನರೋಗ್ಯದಿಂದ ಬಳಲುತ್ತಿದ್ದಾರೆ. ಮುಂದಿನ ದಿನಾಂಕದವರೆಗೂ ಬಂಧನ ಮಾಡದಂತೆ ನಿರ್ದೇಶನ ಮಾಡಬೇಕು. ಪ್ರಭಾಕರ ಭಟ್ ವಿರುದ್ಧ ಸರ್ಕಾರ ರೌಡಿ ಶೀಟ್ ಓಪನ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಇದೇ ವೇಳೆ ದೂರುದಾರೆಯ ಪರ ವಕೀಲರು, ಆರೋಪಿಯ ಹೇಳಿಕೆಯನ್ನು ಗಮನಿಸಬೇಕು. ಮುಸ್ಲಿಂ ಮಹಿಳೆಯರಿಗೆ ಒಬ್ಬ ಗಂಡ ಅಲ್ಲ, ದಿನಕ್ಕೊಬ್ಬ ಗಂಡ ಎಂದಿದ್ದಾರೆ. ಇದು ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತದೆ. ಪೊಲೀಸರು ಹಾಕಿರುವ ಎಲ್ಲಾ ಸೆಕ್ಷನ್ ಗಳು ಸರಿಯಾಗಿವೆ. ಈ ಪ್ರಕರಣದ ಸಂಪೂರ್ಣ ತನಿಖೆಯಾಗಬೇಕು. ಕಾನೂನು ಅದರ ಕೆಲಸ ಮಾಡಲಿ ಎಂದಿದ್ದಾರೆ.
ಇನ್ನು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದು, ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಯ ಬಗ್ಗೆ ನಾವೂ ತನಿಖೆ ನಡೆಸುತ್ತೇವೆ. ಆದರೆ ಸದ್ಯಕ್ಕೆ ಅವರನ್ನು ಬಂಧಿಸುವುದಿಲ್ಲ ಎಂದು ಕೋರ್ಟ್ ಗೆ ತಿಳಿಸಿದೆ. ವಾದ-ಪ್ರತಿವಾದ ಆಲಿಸಿರುವ ಹೈಕೋರ್ಟ್, ಕಲ್ಲಡ್ಕ ಪ್ರಭಾಕರ್ ಭಟ್ ಗೆ ಬಂಧನದಿಂದ ಮಧ್ಯಂತರ ಪರಿಹಾರ ನೀಡಿ, ಜನವರಿ 9 ಕ್ಕೆ ವಿಚಾರಣೆ ಮುಂದೂಡಿದೆ.