ಫೋಕ್ಸೋ ಪ್ರಕರಣ ಸಂಬಂಧ : ಶ್ರೀರಾಮುಲು ವಿರುದ್ಧ ಎಫ್ಐಆರ್..!

1 Min Read

ಬಳ್ಳಾರಿ: ಫೋಕ್ಸೋ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸಂತ್ರಸ್ತೆಯ ಹೆಸರನ್ನು ಬಹಿರಂಗ ಪಡಿಸಬಾರದು ಎಂಬುದಿದೆ. ಯಾಕಂದ್ರೆ ಆ ಸಂತ್ರಸ್ತೆಗೆ ಸಮಸ್ಯೆ ಆಗುತ್ತೆ ಎಂಬ ಕಾರಣಕ್ಕೆ ಬಹಿರಂಗ ಪಡಿಸಬಾರದು ಎಂಬ ಕಾನೂನಿದೆ. ಒಂದು ವೇಳೆ ಬಹಿರಂಗ ಪಡಿಸಿದರೆ ಅದು ಅಪರಾಧವಾಗಿರುತ್ತದೆ. ಇದೀಗ ಅದೇ ಕಾರಣಕ್ಕೆ ಶ್ರೀರಾಮುಲು ಅವರ ಮೇಲೆ ಎಫ್ಐಆರ್ ಆಗಿದೆ.

ಬಳ್ಳಾರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಫೋಕ್ಸೋ ಕೇಸ್ ನ ಸಂತ್ರಸ್ತೆಯ ಹೆಸರು, ವಿಳಾಸ ಬಹಿರಂಗಪಡಿಸಿದ ಆರೋಪದಡಿ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪ್ರಕರಣ ದಾಖಲಾಗಿದೆ. ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾಷಣದ ವೇಳೆ ಸಂವೇದನಾ ಶೀಲ ವಿವರ ಉಲ್ಲೇಖಿಸಿ, ಫೋಕ್ಸೋ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ದೂರಿನನ್ವಯ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಫೋಕ್ಸೋ ಅಡಿಯಲ್ಲಿ ಕೇಸ್ ದಾಖಲಾಗಿದೆ. ಜನವರಿ 17ರಂದು ಬಿಜೆಪಿಯ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡುವಾಗ ಶ್ರೀರಾಮುಲು ಹೆಸರು ಬಹಿರಂಗಪಡಿಸಿದ್ದರು.

ಬಳ್ಳಾರಿ ಗಾಂಜಾ, ಡ್ರಗ್ಸ್ ಹಬ್ ಆಗಿದೆ. ಡ್ರಗ್ಸ್ ಸೇವಿಸಿಯೇ ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳುತ್ತಾ, ಫೋಕ್ಸೋ ಕೇಸ್ ನ ಸಂತ್ರಸ್ತೆಯ ಹೆಸರು, ವಿಳಾಸ, ತರಗತಿ ಹಾಗೂ ಶಾಲೆಯ ಹೆಸರನ್ನೂ ಕೂಡ ಬಹಿರಂಗಪಡಿಸಿದ್ದರು. ಈ ಸಂಬಂಧ ಫೋಕ್ಸೋ ಪ್ರಕರಣದಲ್ಲಿ ಎಫ್ಐಆರ್ ಆಗಿದೆ. ಪೊಲೀಸರು ತನಿಖೆ ನಡೆಸಿದ ಬಳಿಕ ಮುಂದಿನ ನಡೆ ಏನು ಎಂಬುದು ತಿಳಿಯಲಿದೆ.

Share This Article