ವಿಜಯನಗರ: ರಾಜಕೀಯ ಭವಿಷ್ಯದಲ್ಲಿ ಮಕ್ಕಳ ಬುನಾದಿ ಗಟ್ಟಿ ಮಾಡುವುದಕ್ಕೆ ತಂದೆಯಂದಿರು ಯೋಚನೆ ಮಾಡುತ್ತಿದ್ದಾರೆ. ಮಕ್ಕಳಿಗಾಗಿ ಟಿಕೆಟ್ ನಿರೀಕ್ಷೆ ಮಾಡುತ್ತಿದ್ದಾರೆ. ಗೆದ್ದೆ ಗೆಲ್ಲುತ್ತೇವೆ ಎಂಬ ಕ್ಷೇತ್ರದಲ್ಲಿ ಮಕ್ಕಳನ್ನು ನಿಲ್ಲಿಸಿ, ಮತ್ತೊಂದು ಕ್ಷೇತ್ರದಲ್ಲಿ ತಾವೂ ನಿಲ್ಲುವ ಪ್ರಯತ್ನ ಮಾಡುತ್ತಾರೆ. ಈಗ ಸಚಿವ ಆನಂದ್ ಸಿಂಗ್ ಅವರು ಅದೇ ಮಾಡ್ತಾ ಇದ್ದಾರೆ.
ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡುವಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪಾತ್ರವೂ ಮಹತ್ವ ಪಡೆದಿದೆ. ವಿಜಯನಗರವನ್ನು ಈಗ ಮಗನಿಗೆ ಬಿಟ್ಟುಕೊಡಲು ಹೊರಟಿದ್ದಾರೆ. ಬಲ್ಲ ಮೂಲಗಳಿಂದ ಬಂದ ಮಾಹಿತಿ ಪ್ರಕಾರ, 2023ರ ಚುನಾವಣೆಯಲ್ಲಿ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ವಿಜಯನಗರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನಲಾಗಿದೆ.
ವಿಜಯನಗರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು, ಆನಂದ್ ಸಿಂಗ್ ಕೊಪ್ಪಳದಿಂದ ಸ್ಪರ್ಧೆ ಮಾಡಲಿದ್ದಾರೆ.ಈಗಾಗಲೇ ಈ ಸಂಬಂಧ ಬಿಜೆಪಿ ವರಿಷ್ಠರ ಜೊತೆಗೆ ಒಂದು ಸುತ್ತಿನ ಮಾತುಕತೆಯಾಗಿದೆ. ಮಗನಿಗೆ ಟಿಕೆಟ್ ನೀಡುವಂತೆ ಮನವಿ ಇಟ್ಟಿದ್ದಾರಂತೆ. ಇದರ ಬೆನ್ನಲ್ಲೆ ಸಿದ್ದಾರ್ಥ್ ಸಿಂಗ್ ಕೂಡ ಜನಸೇವೆಯಲ್ಲಿ ತೊಡಗಿದ್ದಾರೆ. ಗ್ರಾಮ ವಾಸ್ತವ್ಯ ಮಾಡುವುದು, ಬಡವರಿಗೆ ಸಹಾಯ ಮಾಡುವುದು ಹೀಗೆ ಅನೇಕ ಕೆಲಸಗಳಲ್ಲಿ ತೊಡಗಿದ್ದಾರೆ. ಆನಂದ್ ಸಿಂಗ್ ಒಟ್ಟು ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಹೀಗಾಗಿ ಈ ಬಾರಿ ಮಗನ ಗೆಲುವಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತಿದ್ದಾರೆ.