ಚಿತ್ರದುರ್ಗ : ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳು ಕಲುಷಿತಗೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ನಾಡೋಜ ಡಾ.ಗೋ.ರು.ಚನ್ನಬಸಪ್ಪ ವಿಷಾಧಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು(ರಿ,) ಮೈಸೂರು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ನಡೆದ ಗೊರುಚ ದತ್ತಿನಿಧಿ 2021 ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕಾರಣಿಗಳನ್ನು ನಂಬಿದರೆ ದೇಶ ಉದ್ದಾರವಾಗುವುದಿಲ್ಲ. ಸಾಹಿತ್ಯ, ಸಂಸ್ಕøತಿಯಿಂದ ಮಾತ್ರ ಅಭಿವೃದ್ದಿ ಸಾಧ್ಯ. ಯಾವುದೇ ಕ್ಷೇತ್ರವಾಗಿರಲಿ ಸಮರ್ಪಣಾ ಭಾವ, ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಘನತೆ, ಗೌರವ ಉಳಿಯುತ್ತದೆ. ಆಗ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ.
ದಾಖಲೆ ಪ್ರಕಾರ ನನಗೆ 93 ವರ್ಷವಲ್ಲ. 95 ವರ್ಷವಾಗಿದೆ. ಆದರೂ ಯಾವುದೋ ಶಕ್ತಿ ನನ್ನನ್ನು ನಡೆಸಿಕೊಂಡು ಹೋಗುತ್ತಿದೆ. ನಿಜವಾಗಿಯೂ ಹಳ್ಳಿಗರು ನಮ್ಮ ದೇಶವನ್ನು ಉಳಿಸಿರುವುದು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಏನಾದರೂ ಉದ್ದಾರವಾಗಿದೆ ಎನ್ನುವುದಾದರೆ ಅದು ಹಳ್ಳಿಗರ ಶ್ರಮ ಮತ್ತು ಬೆವರಿನಿಂದ ಮಾತ್ರ ಎಂದು ಹೇಳಿದರು.
ಅನೇಕರು ತಾವು ಹುಟ್ಟಿದ ಹಳ್ಳಿಗಳನ್ನು ಮರೆತಿದ್ದಾರೆ. ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು, ನಿವೃತ್ತರು ತಾವು ಜನಿಸಿದ ಗ್ರಾಮಗಳ ಕಡೆ ತಿರುಗಿಯೂ ನೋಡುವುದಿಲ್ಲ. ಅದು ಕೂಡ ನನ್ನ ಮನಸ್ಸಿಗೆ ಬೇಸರ ತಂದಿದೆ. ಅದಕ್ಕಾಗಿಯೇ ಗ್ರಾಮ ಭಾರತ ಪ್ರತಿಷ್ಟಾನ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಉದ್ಘಾಟಿಸಿದ್ದಾರೆ.
ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿರುವವರು, ನಿವೃತ್ತಿಯಾದವರು ಹಳ್ಳಿಗಳ ಶ್ರೇಯೋಭಿವೃದ್ದಿಗೆ ಶ್ರಮಿಸಲು ಉತ್ತೇಜಿಸುವುದು ಸಂಸ್ಥೆಯ ಉದ್ದೇಶ. ಭಾರತದಲ್ಲಿಯೇ ಮೊಟ್ಟ ಮೊದಲ ಪರಿಕಲ್ಪನೆ ಇದು. ಹಾಗಾಗಿ ಚಳುವಳಿ ರೂಪದಲ್ಲಿ ನಡೆಸಬೇಕೆಂಬ ಆಸೆಯಿದೆ, ಐ.ಎ.ಎಸ್.ಅಧಿಕಾರಿಗಳು, ಉದ್ಯಮಿಗಳು, ಇಂಜಿನಿಯರ್, ಲಾಯರ್‍ಗಳು, ಅಧ್ಯಾಪಕರುಗಳು ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆಂದರು.
ಪ್ರತಿ ಜಿಲ್ಲೆಯಲ್ಲಿಯೂ ಸಮಾವೇಶ ನಡೆಸಲಾಗುವುದು. ಮೊದಲು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸಮಾವೇಶ ನಡೆಯುತ್ತೆ. ಸರ್ಕಾರದ ಎಲ್ಲಾ ಸೌಲಭ್ಯಗಳಿಂದಲೂ ವಂಚಿತರಾಗಿರುವ ಗ್ರಾಮೀಣರ ಬದುಕು ಸುಧಾರಣೆಯಾಗಬೇಕೆನ್ನುವುದಕ್ಕಾಗಿ ಗ್ರಾಮ ಭಾರತ ಪ್ರತಿಷ್ಟಾನ ಸಂಸ್ಥೆಯನ್ನು ಕಟ್ಟಲಾಗಿದೆ. ಅರ್ಹರಿಗೆ ಗೊರುಚ ದತ್ತಿನಿಧಿ ಪ್ರಶಸ್ತಿ ಸಿಕ್ಕಿದೆ. ಜಾನಪದ, ವಚನ ಸಾಹಿತ್ಯ ಹೃದಯದಿಂದ ಸೃಷ್ಟಿಯಾದ ಸಾಹಿತ್ಯ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿದ್ದ ಮುರುಘಾಮಠದ ಡಾ.ಶಿವಮೂರ್ತಿ ಶರಣರು ಮಾತನಾಡಿ ಸಾಹಿತ್ಯದ ಮೂಲ ಸೆಲೆ ಸಂವೇದನೆ. ವ್ಯಕ್ತಿ ಮತ್ತು ಸಮಷ್ಟಿ ಬದುಕು ಸುಧಾರಣೆಯಾಗಬೇಕಾದರೆ ಸಾಹಿತ್ಯ ಬೇಕು. ಸಾಹಿತ್ಯ, ಸಂವೇದನೆಯ ಸ್ಪರ್ಶ ಇಲ್ಲದಿದ್ದರೆ ಆರೋಗ್ಯಪೂರ್ಣ ಬದುಕು ಕಟ್ಟಿಕೊಳ್ಳಲು ಆಗುವುದಿಲ್ಲ. ಸಾಯುವವರನ್ನು ಬದುಕಿಸುವ ಸಾಹಿತ್ಯ ವಚನ ಸಾಹಿತ್ಯ. ಶರಣ ಸಾಹಿತ್ಯ, ವಚನಗಳು ಅಧ್ಯಯನವಾಗಬೇಕು. ಜನಸಾಮಾನ್ಯರು ವಚನಗಳನ್ನು ಅಧ್ಯಯನ ಮಾಡಬೇಕು ಎನ್ನುವುದು ಶಿವಶರಣರ, ಬಸವಾದಿ ಶರಣರ ಉದ್ದೇಶವಾಗಿತ್ತು ಎಂದು ತಿಳಿಸಿದರು.
ಹನ್ನೆರಡನೆ ಶತಮಾನದಲ್ಲಿಯೇ ಅನುಭವ ಮಂಟಪ ಜನಸಾಮಾನ್ಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿತು. ನಿತ್ಯ ಬದುಕಿನಲ್ಲಿ ವಚನಗಳ ಮೌಲ್ಯವಿದೆ. ಆಡಂಬರದ ಜೀವನ ಮಾಡುವವರಿಂದ ಆದರ್ಶಗಳು ಮೂಲೆ ಗುಂಪಾಗುತ್ತವೆ. ಆದರ್ಶವಿಲ್ಲದ ಶರಣರಿಲ್ಲ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ.ಲೋಕೇಶ್ ಅಗಸನಕಟ್ಟೆ ಅಭಿನಂದನಾ ನುಡಿಗಳನ್ನಾಡುತ್ತ ಶರಣ ಸಾಹಿತ್ಯ, ಜಾನಪದ ಸಾಹಿತ್ಯದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಪ್ರತಿ ವರ್ಷವೂ ಗೊರುಚ ದತ್ತಿ ನಿಧಿ ಪ್ರಶಸ್ತಿ ನೀಡುತ್ತಿರುವುದು ದೊಡ್ಡ ಕೆಲಸ. ಶುದ್ದ ಚಾರಿತ್ರ್ಯ ಅವರದು. ಯಾವುದೇ ಹಮ್ಮು.ಗಿಮ್ಮುಗಳಿಲ್ಲದೆ ಕೆಲಸ ಮಾಡಿಕೊಂಡು ಬರುತ್ತಿರುವವರು ಗೊರುಚರವರು. ಅವರ 93 ನೇ ಹುಟ್ಟುಹಬ್ಬದ ನಿಮಿತ್ತ ಚಿತ್ರದುರ್ಗದಲ್ಲಿ ನಾಲ್ವರಿಗೆ ಪ್ರಶಸ್ತಿ ನೀಡಿದ್ದಾರೆ. ನೂರು ವರ್ಷಗಳ ಕಾಲ ಬಾಳಿ ಬದುಕಲಿ ಎಂದು ಹಾರೈಸಿದರು.
ಗೊರುಚ ದತ್ತಿ ನಿಧಿ ಪ್ರಶಸ್ತಿ ಪಡೆದವರು ಸೌಭಾಗ್ಯವಂತರು. ಶರಣ ಸಾಹಿತ್ಯ, ಜಾನಪದ ಸಾಹಿತ್ಯ ಗೊರುಚರವರ ಎರಡು ಕಣ್ಣುಗಳಿದ್ದಂತೆ. 2015 ರಲ್ಲಿ ಪ್ರಶಸ್ತಿಯನ್ನು ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷವೂ ಪ್ರಶಸ್ತಿಗಳನ್ನು ನೀಡುತ್ತ ಬರಲಾಗುತ್ತಿದೆ. ಸಾಹಿತ್ಯ ಬದುಕಿನ ಒಂದು ಭಾಗ ಎಂದು ತಿಳಿದು ಗೊರುಚ ಭಾವಿಸಿರುವುದರಿಂದ ಇಷ್ಟೊಂದು ಸಾಧನೆ ಮಾಡಲು ಆಯಿತು ಎಂದು ಗುಣಗಾನ ಮಾಡಿದರು.
ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿದರು.
ನಿವೃತ್ತ ಕನ್ನಡ ಅಧ್ಯಾಪಕ ಜಿ.ಎ.ಶಿವಲಿಂಗಯ್ಯನವರಿಗೆ ಶರಣ ಪ್ರಶಸ್ತಿ, ನಿವೃತ್ತ ಪತ್ರಾಂಕಿ ವ್ಯವಸ್ಥಾಪಕ ಜೀನಹಳ್ಳಿ ಸಿದ್ದಲಿಂಗಪ್ಪನವರಿಗೆ ಜಾನಪದ ಪ್ರಶಸ್ತಿ, ನಿವೃತ್ತ ಅಧ್ಯಾಪಕಿ ಡಾ.ವಿಜಯಾದೇವಿ ಇವರಿಗೆ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ, ಉಪನ್ಯಾಸಕ ಡಾ.ಎನ್.ಎನ್. ಚಿಕ್ಕಮಾದುರವರಿಗೆ ಜಾನಪದ ಸಾಹಿತ್ಯ ಗ್ರಂಥ ಪ್ರಶಸ್ತಿ ನೀಡಲಾಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ.ವೀರೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ವೇದಿಕೆಯಲ್ಲಿದ್ದರು.