Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು ಉಪಚುನಾವಣೆಗೆ ರಾಜಕೀಯ ರಣಕಹಳೆ: ಕಾಂಗ್ರೆಸ್‌, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಟಿಕೆಟ್ ಸಮರ ತೀವ್ರ

---Advertisement---

ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ತೆರವಾದ ಹಿರಿಯೂರು ವಿಧಾನಸಭಾ ಕ್ಷೇತ್ರ ಈಗ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿ ಪರಿಣಮಿಸಿದೆ. ಉಪಚುನಾವಣೆ ಅಧಿಕೃತ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್‌ಗಾಗಿ ಒಳಜಂಗ್ ಆರಂಭವಾಗಿದೆ.

ವಿಶೇಷವಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಪಾಳಯದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವೇ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಎರಡೂ ಪಕ್ಷಗಳು ಕ್ಷೇತ್ರದ ಮೇಲೆ ತಮ್ಮದೇ ಹಕ್ಕು ಸಾಧಿಸಲು ತಂತ್ರ ರೂಪಿಸುತ್ತಿವೆ.

ಹಿರಿಯೂರು ಕ್ಷೇತ್ರ ಜೆಡಿಎಸ್‌ಗೆ ಬೇಕು: ಕುಮಾರಸ್ವಾಮಿ ಪ್ಲಾನ್
ಹಿರಿಯೂರು ಕ್ಷೇತ್ರದಲ್ಲಿ ಈ ಬಾರಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನವರನ್ನೇ ಕಣಕ್ಕಿಳಿಸಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೆಹಲಿಯಲ್ಲಿ ಬಿಜೆಪಿ ಉನ್ನತ ನಾಯಕರೊಂದಿಗೆ ಅವರು ಈಗಾಗಲೇ ಪ್ರಾಥಮಿಕ ಮಾತುಕತೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ಹಿರಿಯೂರಿನ ಜೆಡಿಎಸ್ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ, “ಟಿಕೆಟ್‌ ವಿಚಾರವನ್ನು ನಾನು ನೋಡಿಕೊಳ್ಳುತ್ತೇನೆ. ಆದರೆ ಗೆಲುವಿನ ಜವಾಬ್ದಾರಿ ನಿಮ್ಮದು” ಎಂದು ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ..

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ. ರವೀಂದ್ರಪ್ಪ ಸುಮಾರು 38 ಸಾವಿರ ಮತಗಳನ್ನು ಪಡೆದಿದ್ದು, ಈ ಬಾರಿ ಬಿಜೆಪಿಯ ಸಾಂಪ್ರದಾಯಿಕ ಮತಗಳೂ ಸೇರಿದರೆ ಗೆಲುವು ಸುಲಭವಾಗಬಹುದು ಎಂಬ ಲೆಕ್ಕಾಚಾರ ಜೆಡಿಎಸ್ ಪಾಳಯದಲ್ಲಿದೆ.

ಕಾಂಗ್ರೆಸ್‌ನಲ್ಲಿ ಪೂರ್ಣಿಮಾ ಶ್ರೀನಿವಾಸ್ ಹೆಸರು ಮುಂಚೂಣಿ
ಇತ್ತ ಕಾಂಗ್ರೆಸ್ ಪಾಳಯದಲ್ಲಿ ಅನುಕಂಪದ ಅಲೆ ಇದ್ದರೂ, ಟಿಕೆಟ್‌ಗಾಗಿ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಹಿರಿಯೂರು ಕ್ಷೇತ್ರದಿಂದ ಈ ಹಿಂದೆ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದ ಪೂರ್ಣಿಮಾ, ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಮುಂದಿನ ಚುನಾವಣೆಯಲ್ಲಿ ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ ಅವರು, ಈಗ ಮತ್ತೆ ತಮ್ಮ ಹಳೆಯ ಕ್ಷೇತ್ರದಲ್ಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

‘ಕಾಡುಗೊಲ್ಲ’ ಮತಗಳ ಮೇಲೆ ಬಿಜೆಪಿ ಕಣ್ಣು
ಮೈತ್ರಿ ಪಕ್ಷ ಜೆಡಿಎಸ್ ಸೀಟಿಗಾಗಿ ಒತ್ತಡ ಹೇರುತ್ತಿದ್ದರೂ, ಬಿಜೆಪಿ ತನ್ನದೇ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದೆ. ಕ್ಷೇತ್ರದಲ್ಲಿ ಪ್ರಭಾವಿ ಮತಬ್ಯಾಂಕ್ ಹೊಂದಿರುವ ‘ಕಾಡುಗೊಲ್ಲ’ ಸಮುದಾಯದ ಮತಗಳನ್ನು ಸೆಳೆಯಲು ಅದೇ ಸಮುದಾಯದ ಮುಖಂಡನನ್ನು ಅಭ್ಯರ್ಥಿಯಾಗಿಸಲು ಬಿಜೆಪಿ ಪ್ಲಾನ್ ಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ಅವರನ್ನು ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಂಸದ ಯದುವೀರ್ ಒಡೆಯರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ರಾಜಣ್ಣ ಅವರನ್ನೇ ಹಿರಿಯೂರು ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ..

ಉಪಚುನಾವಣೆಗೆ ಮುನ್ನವೇ ಕಾವು
ಹಿರಿಯೂರು ಕ್ಷೇತ್ರದಲ್ಲಿ ಜಾತಿ ಸಮೀಕರಣ, ಮೈತ್ರಿ ರಾಜಕೀಯ, ಅನುಕಂಪದ ಅಲೆ ಮತ್ತು ಸ್ಥಳೀಯ ನಾಯಕತ್ವ ಸೇರಿ ಉಪಚುನಾವಣೆಯನ್ನು ರಾಜ್ಯದ ಅತ್ಯಂತ ಪ್ರತಿಷ್ಠಿತ ರಾಜಕೀಯ ಸಮರವಾಗಿಸಿದೆ. ಅಧಿಕೃತ ಚುನಾವಣಾ ಘೋಷಣೆಗೂ ಮುನ್ನವೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೈಡ್ರಾಮಾಗೆ ವೇದಿಕೆ ಸಜ್ಜಾಗುತ್ತಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now