ಚಿತ್ರದುರ್ಗ. ಏ.02: ಇಂದಿನ ಪರಿಸ್ಥಿತಿಯಲ್ಲಿ ಉತ್ತಮ ರಾಜ್ಯ, ರಾಷ್ಟ್ರ ನಿರ್ಮಾಣ ಹಾಗೂ ಸಮಾಜದ ಶಾಂತಿ, ನೆಮ್ಮದಿ ಕಾಪಾಡಲು ಪೊಲೀಸ್ ಸೇವೆ ಅತ್ಯವಶ್ಯಕವಾಗಿದೆ ಎಂದು ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹೆಚ್.ಆರ್.ಜ್ಞಾನಮೂರ್ತಿ ಅಭಿಪ್ರಾಯಪಟ್ಟರು.

ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಲು ಹಾಗೂ ದುರ್ಬಲ ವರ್ಗದವರಿಗೆ ನ್ಯಾಯ ದೊರಕಿಸಿ ಕೊಡಲು ಪೊಲೀಸ್ ಇಲಾಖೆಯ ಕಾರ್ಯ ಮಹತ್ತರವಾದುದು. ರಾಜ್ಯ ಸರ್ಕಾರದ ಸೇವೆಗಳಲ್ಲಿ ಇತರೆ ಇಲಾಖೆಗಳಿಗಿಂತಲೂ ಪೊಲೀಸ್ ಇಲಾಖೆಯ ಕಾರ್ಯ ಮಹತ್ವದ್ದಾಗಿದೆ. ಇಲಾಖೆಯಲ್ಲಿ ಶ್ರದ್ಧೆ, ಪರಿಶ್ರಮ, ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸಿದರೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಲಿದೆ ಎಂದು ಕಿವಿಮಾತು ಹೇಳಿದರು.
ಹಗಲಿರುಳು ದುಡಿಯುವ ಪೊಲೀಸ್ ಇಲಾಖೆಯ ಪೊಲೀಸರಿಗೆ ಇಲಾಖೆಯಿಂದ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ತನ್ನ ಕುಟುಂಬದ ಎಲ್ಲ ಸದಸ್ಯರಿಗೂ ಚಿಕಿತ್ಸೆ ಕಲ್ಪಿಸಿರುವುದು ತುಂಬಾ ಅನುಕೂಲಕರವಾಗಿದೆ. ಪೊಲೀಸ್ ಇಲಾಖೆಯಿಂದ ಪ್ರತಿ ತಿಂಗಳು ನಿವೃತ್ತಿ ಹೊಂದುವ ಪೊಲೀಸರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕರ್ತವ್ಯದ ಕೊನೆಯ ದಿನದಂದೇ ಬೀಳ್ಕೊಡುಗೆ ಸಮಾರಂಭ ನೀಡುತ್ತಿರುವುದು ಸಂತಸದ ಸಂಗತಿ ಎಂದು ಶ್ಲಾಘಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ನಾಗರೀಕರೆಲ್ಲರೂ ಶಾಂತಿ, ನೆಮ್ಮದಿಯಿಂದ ಇರಲು ಹೆಮ್ಮೆಯ ಪೊಲೀಸರು ಕಾರಣ. ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವುದು ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯು ಜಾಣ್ಮೆ ಹಾಗೂ ತಂತ್ರಜ್ಞಾನದ ನೆರವಿನ ಮೂಲಕ ಸೈಬರ್ ಅಪರಾಧ ತಡೆಗಟ್ಟಬೇಕು ಹಾಗೂ ಈ ಕುರಿತು ನಾಗರೀಕರಿಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ನಾಡಿನ ಆಸ್ತಿಯಾಗಿರುವ ಪೊಲೀಸರು ಉತ್ತಮ ಆರೋಗ್ಯ, ಹವ್ಯಾಸಗಳನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಪೊಲೀಸರ ಜೀವನಮಟ್ಟವನ್ನು ಸುಧಾರಿಸುವ ಅವಶ್ಯಕತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ನಿವೃತ್ತರಾಗಿರುವ ಹಾಗೂ ಸೇವೆಯಲ್ಲಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಿತಚಿಂತನೆ ಮತ್ತು ಕ್ಷೇಮಾಭಿವೃದ್ಧಿಗಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿ ಅಡಿಯಲ್ಲಿ ನಿಧಿ ಸಂಗ್ರಹಿಸಿ, ಈ ರೀತಿಯಾಗಿ ಕ್ರೂಢೀಕರಣಗೊಂಡ ಹಣದಲ್ಲಿ ವಿವಿಧ ರೀತಿಯ ಸಹಾಯ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮ್ಮಿಕೊಂಡು ಬರಲಾಗುತ್ತಿದೆ. ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ಅವರ ಕುಟುಂಬ ವರ್ಗದವರ ಸಲುವಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಲ್ಯಾಣ ನಿಧಿಯಿಂದ ಈಗಾಗಲೇ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸನ್ಮಾನ:
2024ರ ಏಪ್ರಿಲ್ 01 ರಿಂದ 2025ರ ಮಾರ್ಚ್ 31 ರವರೆಗೆ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ವಿವರ ಇಂತಿದೆ. ಎಎಸ್‍ಐಗಳಾದ ಧರಣೇಶಪ್ಪ, ಸಿ.ಅಜ್ಜಣ್ಣ, ಟಿ.ಉಮಾಶಂಕರ್, ಸಣ್ಣಬೋರಯ್ಯ, ಪಿ.ಮಂಜುನಾಥ, ಟಿ.ಕೃಷ್ಣಮೂರ್ತಿ, ಎನ್.ತಿಪ್ಪೇಸ್ವಾಮಿ, ಕೆ.ಬಿ.ಮಂಜುನಾಥ್, ರುದ್ರಪ್ಪ, ಹೆಚ್.ಗಣಪತಿ, ಟಿ.ರೇವಣಸಿದ್ಪಪ್ಪ, ಎನ್.ಪ್ರಕಾಶ್, ಎಸ್.ಡಿ.ವಸಂತ್ ಕುಮಾರ್, ರಾಮಚಂದ್ರರೆಡ್ಡಿ, ಎಆರ್‍ಎಸ್‍ಐ ಪಿ.ಕಾಟಯ್ಯ, ಡಿ.ಮಂಜುನಾಥ, ಪಿಎಸ್‍ಐಗಳಾದ ಕೆ.ಪ್ರಾಣೇಶ್, ಎಲ್.ಆರ್.ಸಂಜಯ್, ಸಿಹೆಚ್‍ಸಿ ಎಂ.ಕೆ.ವೆಂಕಟೇಶ್ ರೆಡ್ಡಿ, ಸಿಪಿಸಿಗಳಾದ ಈಶ್ವರಪ್ಪ, ಬಿ.ಬಸವರಾಜು ಹಾಗೂ ಪಿಎಸ್‍ಐ ಹೆಚ್.ಆರ್.ಜ್ಞಾನಮೂರ್ತಿ ಸೇರಿದಂತೆ ಒಟ್ಟು 22 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆ ಅಂಗವಾಗಿ ಪರೇಡ್ ಕಮಾಂಡರ್ ಆರ್‍ಪಿಐ ಶಿವರಾಜ್ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಉಪವಿಭಾಗ ಡಿವೈಎಸ್‍ಪಿ ದಿನಕರ್, ಚಳ್ಳಕೆರೆ ಡಿವೈಎಸ್‍ಪಿ ರಾಜಣ್ಣ, ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಮ ಪಾಟೀಲ್, ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಭೀಮಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

