ಚಿನ್ನಾಭರಣ ದೋಚಿದ ಕೇಸ್ ನಲ್ಲಿ ಪೊಲೀಸರೇ ಲಾಕ್ : ದಾವಣಗೆರೆಯಲ್ಲಿ ಏನಿದು ಅವಸ್ಥೆ..?

1 Min Read

ದಾವಣಗೆರೆ: ಬೇಲಿ ಎದ್ದು ಹೊಲ‌ ಮೇಯ್ದಂಗೆ ಎಂಬ ಗಾದೆ ಮಾತನ್ನ ಹಿರಿಯರು ಸುಮ್ಮನೆ ಮಾಡಿಲ್ಲ. ಅದಕ್ಕೆ ಅಂತ ಕಣ್ಣ ಮುಂದೆ ಸಾಕಷ್ಟು ಉದಾಹರಣೆಗಳು ನಡೆದಿವೆ. ಈಗ ದಾವಣಗೆರೆಯಲ್ಲೂ ನಡೆದಿದೆ. ಚಿನ್ನಾಭರಣ ಕಳ್ಳತನದಲ್ಲಿ ಪೊಲೀಸರು ಕೂಡ ಭಾಗಿಯಾಗಿದ್ದಾರೆ. ಈಗ ಈ ಕೇಸಲ್ಲಿ ಇಬ್ಬರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿ ನಾಲ್ವರನ್ನು ಪೊಲೀಸರೇ ಬಂಧಿಸಿದ್ದಾರೆ. ಕೆಟಿಜೆ ನಗರದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

 

ಆಭರಣ ತಯಾರಕರೊಬ್ಬರಿಂದ 7.5 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಆರೋಪದಲ್ಲಿ, ಪೂರ್ವ ವಲಯದ ಐಜಿಪಿ ಕಚೇರಿಯ ಇಬ್ಬರು ಪಿಎಸ್‌ಐಗಳು ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾರವಾರದ ಆಭರಣ ತಯಾರಕ ವಿಶ್ವನಾಥ್‌ ಅರ್ಕಸಾಲಿ ಅವರನ್ನು ಸೋಮವಾರ ನಸುಕಿನಲ್ಲಿ ಸುಲಿಗೆ ಮಾಡಿದ ಆರೋಪ ಇವರ ಮೇಲಿದೆ.

ವಿಶ್ವನಾಥ್ ಅವರು ಮಂಡಿಪೇಟೆ, ಹಳೆಪೇಟೆಯ ಕೆಲ ಆಭರಣ ಮಾರಾಟಗಾರರು. ಇವರು ಚಿನ್ನದ ಗಟ್ಟಿ ಹಾಗೂ ಹಳೆಯ ಉಂಗುರುಗಳನ್ನು ಸಂಗ್ರಹಿಸಿ ಭಾನುವಾರ ಮಧ್ಯರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಕಾರವಾರಕ್ಕೆ ಮರಳಲು ಹುಬ್ಬಳ್ಳಿ ಮಾರ್ಗದ ಬಸ್ ಏರಿದ ಅವರನ್ನು ಪಿಎಸ್‌ಐಗಳು ವಶಕ್ಕೆ ಪಡೆದಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಸಮೀಪದ ಕೆಟಿಜೆ ನಗರ ಪೊಲೀಸ್ ಠಾಣೆಯ ಬಳಿಗೆ ವಿಶ್ವನಾಥ್‌ ಅವರನ್ನು ಕರೆತಂದಿದ್ದಾರೆ. ಠಾಣೆಯ ಹೊರಭಾಗದಲ್ಲಿ ಕಾರು ನಿಲ್ಲಿಸಿ ಕೆಲಹೊತ್ತು ಠಾಣೆಯಲ್ಲಿದ್ದ ಪೊಲೀಸರೊಂದಿಗೆ ಚರ್ಚಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿಶ್ವನಾಥ್ ಅವರನ್ನು ಬೆದರಿಸಿ, ಅವರಿಂದ ಚಿನ್ನಾಭರಣ ದೋಚಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.

Share This Article