ಸುದ್ದಿಒನ್, ಚಿತ್ರದುರ್ಗ, ಜೂನ್. 21 : ಕವಿ, ಸಾಹಿತಿ, ನಾಟಕಕಾರ ಹಾಗೂ ಚಲನಚಿತ್ರ ನಿರ್ದೇಶಕ ಬಹುಮುಖ ಪ್ರತಿಭೆ ಎಚ್.ಎಸ್.ವಿ ಎಂದೇ ಸಾಹಿತ್ಯ ಲೋಕಕ್ಕೆ ಚಿರಪರಿತರಾದ ಡಾ.ಹೊದಿಗೆರೆ ಶಾನುಭೋಗ್ ವೆಂಕಟೇಶ್ಮೂರ್ತಿ ಅಗಲಿಕೆ ಬೇಸರ ತರಿಸಿದೆ.
ಭಾವಲೋಕದ ಭಾವನಾಜೀವಿ ಎಚ್.ಎಸ್.ವಿ ಭಾವಗೀತೆಗಳು ಕನ್ನಡ ನಾಡಿನ ಪ್ರತಿಯೊಬ್ಬರಲ್ಲೂ ಅಚ್ಚಳಿಯದೇ ಉಳಿದಿದೆ. ಈ ಕವಿ ರಚಿಸಿದ ಲೋಕದ ಕಣ್ಣಿಗೆ ರಾಧೆಯು ಕೂಡ, ಬಯಸಿದೇ ನಿನ್ನನು ಭಾವದಾ ಮೇಳಕೆ, ಆ ಕಪ್ಪು ಹುಡುಗಿ, ಐದು ಬೆರಳು ಸೇರಿ ಒಂದು ಮುಷ್ಠಿಯು ಮುಂತಾದ ಕವನಗಳು ಕೇಳುಗರ ಆಸಕ್ತಿಯನ್ನು ಅರಳಿಸುತ್ತದೆ ಎಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಆರ್.ಚಂದ್ರಿಕಾ ಅಭಿಪ್ರಾಯಪಟ್ಟರು.
ಶುಕ್ರವಾರ ಸಂಜೆ ಕನಕ ನಗರದಲ್ಲಿರುವ ರಂಗಸೌರಭ ಕಲಾ ಸಂಘ, ಗೆಳೆಯರ ಬಳಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಸ್ಮರಣಾರ್ಥ ಭಾವಗಾನ ನುಡಿನಮನ ಅಂಗವಾಗಿ ಕವಿಕಾವ್ಯ, ಪರಿಚಯ, ಭಾವಗೀತೆಗಳ ಕರೋಕೆ ಗಾಯನ ಕಾರ್ಯಕ್ರಮ ಕುರಿತು ಮಾತನಾಡಿದರು.
ಹಿರಿಯ ಸಾಹಿತಿ ಎಚ್. ಎಸ್. ವಿ ಯವರ ಭಾವಗೀತೆಗಳಲ್ಲಿ ಭಾವನಾತ್ಮಕ ಮೌಲ್ಯಯುತ ಸಂಬಂಧಗಳನ್ನು ಗಟ್ಟಿಗೊಳಿಸಿದ್ದರು. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿನಂತೆ ಎಚ್.ಎಸ್.ವಿ ಅಕ್ಷರಶಃ ಪರಿಸರ, ಪ್ರೇಮದ ಗುಂಗಿನಲ್ಲಿ ಆಸ್ವಾದಿಸುವಿಕೆಯ ಮಹತ್ವವನ್ನು ಕಂಡುಕೊಟ್ಟಿದ್ದಾರೆ ಎಂದರು.

ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಚಿತ್ರದುರ್ಗದಿಂದ ಚನ್ನಗಿರಿ ರಸ್ತೆಯಲ್ಲಿ 50 ಕಿ.ಮೀ ದೂರದಲ್ಲಿರುವ ಹೊದಿಗೆರೆ ಎಚ್.ಎಸ್.ವಿ ಯವರ ಹುಟ್ಟೂರು, ಮರಾಠ ಚಕ್ರವರ್ತಿ ಶಿವಾಜಿಯ ತಂದೆ ಷಹಜೀಯವರ ಸಮಾಧಿಯಿದೆ. ಐತಿಹಾಸಿಕ ಹಿನ್ನೆಲೆ ಮತ್ತು ಹಳ್ಳಿಯ ಒಡನಾಟದಲ್ಲಿ ಸಾಮಾಜಿಕವಾಗಿ ಬೆಳೆದ ಕವಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಭಾವಗೀತೆಗಳಿಂದಲೇ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಕವಿಯಾಗಿದ್ದಾರೆ. ಸುತ್ತಮುತ್ತಲ ಪರಿಸರ, ಮಲ್ಲಾಡಿಹಳ್ಳಿಯ ತಿರುಕ ಎಂದೇ ಹೆಸರಾದ ಯೋಗಗುರು ಶ್ರೀ ರಾಘವೇಂದ್ರ ಸ್ವಾಮಿ ಆರೋಗ್ಯಧಾಮದ ಒಡನಾಟ, ಚನ್ನಗಿರಿ, ಚಿತ್ರದುರ್ಗ ಕೋಟೆ ಪರಿಸರದಲ್ಲಿ ಒಡನಾಡಿಯಾಗಿ ಬೆಳೆದ ಎಚ್.ಎಸ್.ವಿ ಹಿರಿಯ ಸಾಹಿತಿಗಳ ಅಗ್ರಮಾನ್ಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ಗಾಯಕ ಎಸ್. ಸತ್ಯನಾರಾಯಣ ಎಚ್.ಎಸ್.ವಿ ಹಾಗೂ ಜಿ.ಎಸ್.ಎಸ್ ವಿರಚಿತ ಭಾವಗೀತೆಗಳನ್ನು ಹಾಡಿದರು. ಹಿರಿಯ ಕಲಾವಿದ ಹಾಗೂ ಸಮಾಜಸೇವಕ ಆರ್.ಗುರುಮೂರ್ತಿ, ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಆರ್.ಎಸ್.ಉಮೇಶ್, ಬಾದರದಿನ್ನಿ ಆರ್ಟ್ಸ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕøತಿಕ ಸಂಸ್ಥೆ ಕಾರ್ಯದರ್ಶಿ ಎಂ.ಬಿ.ಮುರುಳಿ, ಥಿಯೇಟರ್ ಫೋರ್ಟ್ ರಂಗನಿರ್ದೇಶಕ ಧೀಮಂತ್ ರಾಮ್, ಸರಸ್ವತಿ ಅರುಣ್ ಕುಮಾರ್ ಕೆ.ಆರ್, ರಂಗವಾದ್ಯ ಕಲಾವಿದ ಹೇಮಂತ್ ಸಂಡೂರು, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಮಜಹರ್ಉಲ್ಲಾ, ಛಾಯಾಗ್ರಾಹಕ ವಿ.ಚಂದ್ರಪ್ಪ ಉಪಸ್ಥಿತರಿದ್ದರು.



