ನವದೆಹಲಿ: ಬರ ಪರಿಹಾರದ ಹಣಕ್ಕಾಗಿ ಇಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಮೋದಿಯವರು ಡಿಕೆ ಶಿವಕುಮಾರ್ ಅವರ ಹೆಸರನ್ನು ಸಹ ಪ್ರಸ್ತಾಪಿಸಿದ್ದಾರಂತೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ಜೊತೆಗೆ ಚರ್ಚೆ ನಡೆಸಿ, ರಾಜ್ಯಕ್ಕೆ ನೀಡಬೇಕಾದ ಪರಿಹಾರ ಹಣಕ್ಕೆ ಮನವಿ ಮಾಡಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು, ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಪ್ರೈಮ್ ಮಿನಿಸ್ಟರ್ ನಿನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದಾರಯ್ಯ ಎಂದೇ ಹೇಳಿದ್ದಾರೆ. ಇದಕ್ಕೆ ಪಕ್ಕದಲ್ಲಿಯೇ ಇದ್ದ ಡಿಕೆ ಶಿವಕುಮಾರ್ ಅವರು, ಏನಂತ ಕೇಳಿದರು ಎಂದು ಪ್ರಶ್ನೆ ಕೂಡ ಮಾಡಿದ್ದಾರೆ.
ಇದಕ್ಕೆ ನಗುತ್ತಲೇ ಉತ್ತರ ನೀಡಿದ ಸಿದ್ದರಾಮಯ್ಯ ಅವರು, ಡಿಕೆ ಶಿವಕುಮಾರ್ ಅವರು ಕೂಡ ನುಮ್ಮನ್ನು ಭೇಟಿಯಾಗುವುದಕ್ಕೆ ಸಮಯ ಕೇಳಿದ್ದಾರೆ. ಅದಕ್ಕೆ ನಾನು ಕೊಡಿ ಎಂದು ಹೇಳಿದ್ದೇನೆ. ಅವರು ದೆಹಲಿಯಲ್ಲಿಯೇ ಇದ್ದಾರೆ ಎಂದು ಹೇಳೀದ್ದೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ಪ್ರಧಾನಿ ಮೋದಿಯವರು ಅಧಿಕಾರಿಗಳಿಂದ ರಿಪೋರ್ಟ್ ತರಿಸಿಕೊಳ್ಳುತ್ತಿದ್ದಾರಂತೆ. ಆಮೇಲೆ ಭೇಟಿಯಾಗಲು ಸಮಯ ಕೊಡಬಹುದು ಎಂದು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ದೆಹಲಿ ಪ್ರವಾಸದಲ್ಲಿ ಇದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯ ವಿಚಾರವಾಗಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವುದಕ್ಕೆ ಸಮಯ ಕೇಳಿದ್ದಾರೆ. ಹೀಗಾಗಿ ಇಬ್ಬರ ನಡುವೆ ಈ ವಿಚಾರ ಪ್ರಸ್ತಾಪವಾಗಿದೆ. ದೆಹಲಿ ಪ್ರವಾಸ ಮುಗಿಸಿ ಬರುವುದರೊಳಗೆ ಡಿಕೆ ಶಿವಕುಮಾರ್ ಅವರಿಗೂ ಪ್ರಧಾನಿ ಭೇಟಿಗೆ ಅವಕಾಶ ಸಿಕ್ಕರು ಸಿಗಬಹುದು.