Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ : ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ

---Advertisement---

ಬೆಂಗಳೂರು :  ಬೆಂಗಳೂರಿನ ಸಂಚಾರ ದಟ್ಟಣೆಗೆ ಮತ್ತಷ್ಟು ಪರಿಹಾರ ಒದಗಿಸುವ ನಿಟ್ಟಿನಲ್ಲಿ ‘ನಮ್ಮ ಮೆಟ್ರೋ’ದ ಬಹುನಿರೀಕ್ಷಿತ ಪಿಂಕ್ ಲೈನ್ ಸಾರ್ವಜನಿಕ ಸೇವೆಗೆ ಮುಕ್ತವಾಗಲು ಸಜ್ಜಾಗಿದೆ. ತಾವರೆಕೆರೆಯಿಂದ ಕಾಳೇನ ಅಗ್ರಹಾರದವರೆಗಿನ ನೂತನ ಎಲಿವೇಟೆಡ್ ಕಾರಿಡಾರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಸಿರು ನಿಶಾನೆ ತೋರಲಿದ್ದಾರೆ.

ಮಧ್ಯಾಹ್ನ 12:45ಕ್ಕೆ ಸುದ್ದಗುಂಟೆಪಾಳ್ಯದ (ತಾವರೆಕೆರೆ) ಮೆಟ್ರೋ ನಿಲ್ದಾಣದಲ್ಲಿ ಈ ನೂತನ ರೈಲಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಉದ್ಘಾಟನೆಗಾಗಿ ವಿಶೇಷವಾಗಿ ತಳಿರು ತೋರಣಗಳಿಂದ ಅಲಂಕೃತಗೊಂಡಿರುವ ಹೊಸ ರೈಲಿನಲ್ಲಿ ಪ್ರಧಾನಿಯವರು ಐಐಎಂಬಿ (IIMB) ವರೆಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಐತಿಹಾಸಿಕ ಕ್ಷಣದಲ್ಲಿ ರಾಜ್ಯಪಾಲರಾದ ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸಾಥ್ ನೀಡಲಿದ್ದಾರೆ.

ಶನಿವಾರದಿಂದ ಸಾರ್ವಜನಿಕರಿಗೆ ಮುಕ್ತ ಸೇವೆ

ಮೊದಲ ಹಂತದಲ್ಲಿ ಉದ್ಘಾಟನೆಯಾಗುತ್ತಿರುವ ಒಟ್ಟು 7.5 ಕಿಲೋಮೀಟರ್ ಉದ್ದದ ಈ ಎಲಿವೇಟೆಡ್ ಕಾರಿಡಾರ್‌ನಲ್ಲಿ ಶನಿವಾರದಿಂದಲೇ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಇದು ಆರ್.ವಿ. ರಸ್ತೆ-ಬೊಮ್ಮಸಂದ್ರದ ಹಳದಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವುದರೊಂದಿಗೆ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಈ ಮಾರ್ಗದ ಉಳಿದ 13.75 ಕಿಲೋಮೀಟರ್ ಸುರಂಗ ಕಾಮಗಾರಿಯು 2027ರ ಮೇ ತಿಂಗಳ ವೇಳೆಗೆ ಪೂರ್ಣಗೊಳ್ಳುವ ಅಂದಾಜಿದ್ದು, ಆ ಬಳಿಕ ಎಂ.ಜಿ. ರಸ್ತೆ ನಿಲ್ದಾಣವು ಪ್ರಮುಖ ಇಂಟರ್‌ಚೇಂಜ್ ಆಗಿ ರೂಪುಗೊಳ್ಳಲಿದೆ.

15,600 ಕೋಟಿ ರೂ.ಗಳ ಯೋಜನೆಗಳಿಗೆ ಶಂಕುಸ್ಥಾಪನೆ

ಬೆಳಗ್ಗೆ 10:45ಕ್ಕೆ ಆನೇಕಲ್ ಬಳಿಯ ಪ್ರಶಾಂತಿ ಕುಟೀರದ ಸ್ವರ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ, ಮೆಟ್ರೋ ಉದ್ಘಾಟನೆಯ ಬಳಿಕ ಮಧ್ಯಾಹ್ನ 1:15ಕ್ಕೆ ಐಐಎಂಬಿ ಆವರಣದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ 15,600 ಕೋಟಿ ರೂಪಾಯಿಗಳಿಗೂ ಮೀರಿದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಜಿಬಿಎ (GBA) ವತಿಯಿಂದ ಈಗಾಗಲೇ ಮೆಟ್ರೋ ನಿಲ್ದಾಣಗಳ ಸುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ಮಾಡಿ, ಗುಂಡಿ ಮುಚ್ಚುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

ಕರಾವಳಿಗೆ ವಂದೇ ಭಾರತ್ ರೈಲು ಭಾಗ್ಯ

ರಾಜಧಾನಿ ಬೆಂಗಳೂರು ಹಾಗೂ ಕರಾವಳಿಯನ್ನು ಬೆಸೆಯುವ ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು-ಮಡಗಾಂವ್ ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಇಂದು ಮೋದಿಯವರು ಚಾಲನೆ ನೀಡಲಿದ್ದಾರೆ. ಐಐಎಂಬಿ ಆಡಿಟೋರಿಯಂನಿಂದಲೇ ವರ್ಚುವಲ್ ಮೂಲಕ ಪ್ರಧಾನಿಗಳು ಹಸಿರು ನಿಶಾನೆ ತೋರಲಿದ್ದು, ಈ ವೇಳೆ ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ನೈಋತ್ಯ ರೈಲ್ವೆ ವತಿಯಿಂದ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

Join WhatsApp

Join Now

Join Telegram

Join Now