ಬೆಂಗಳೂರು: ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳ ಬಗ್ಗೆಯೇ ಸಾಕಷ್ಟು ಚರ್ಚೆಯಾಗುತ್ತಾ ಇದೆ. ಅದರಲ್ಲೂ ವಿರೋಧ ಪಕ್ಷದವರು ಹೆಚ್ಚಾಗಿಯೇ ಪ್ರಶ್ನಿಸುತ್ತಿದ್ದಾರೆ. ಯೋಜನೆಗಳ ಜಾರಿ ಬಗ್ಗೆ ಚರ್ಚೆ ನಡೆಸಲು ಇಂದು ಕೂಡ ಸಭೆ ನಡೆಸಲಾಗಿತ್ತು. ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲಾಗುತ್ತದೆ ಎಂದಹ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಕೆಶಿ, ಗ್ಯಾರಂಟಿ ಯೋಜನೆಗಳ ಬಗ್ಗೆ ನಾವೂ ಬದ್ಧರಾಗಿದ್ದೇವೆ. ಅಧಿಕಾರಿಗಳು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ತಿಳಿಸಿದ್ದಾರೆ. ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಇಂದಿನ ಅಭೆಯಲ್ಲಿಯೂ ನಮ್ಮ ಪ್ರಣಾಳಿಕೆ ಹಾಗೂ ಗ್ಯಾರಂಟಿಗಳ ಬಗ್ಗೆ ಚರ್ಚೆ ನಡೆಸಿದ್ದೇವೆ.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಒಂದಷ್ಟು ಆಯ್ಕೆಗಳನ್ನು ನೀಡಿದ್ದಾರೆ. ಯಾರೂ ಕೂಡ ಊಹಾಪೋಹಗಳಿಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳಬೇಡಿ. ನಮ್ಮ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವುದು ನಮ್ಮ ಕರ್ತವ್ಯ. ಅವರು ಏನಾದರೂ ಹೇಳಿಕೊಳ್ಳಲಿ, ಸಲಹೆಯನ್ನಾದರೂ ನೀಡಲಿ. ಒತ್ತಡ ಬೇಕಾದರೂ ಹಾಕಲಿ, ಹೋರಾಟ ಬೇಕಾದರೂ ಮಾಡಲಿ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾತನಾಡುವವರನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಬಿಜೆಪಿ ಈ ಹಿಂದೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಾಗ ಯಾರು ಮಾತನಾಡಿರಲಿಲ್ಲ ಎಂದು ತಮ್ಮ ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದಾರೆ.