ಹುಬ್ಬಳ್ಳಿ: ಸಿಎಂ ಹುದ್ದೆಯಲ್ಲಿದ್ದುಕೊಂಡು ಆಡಳಿತ ನಡೆಸಿದವರು ಜೆಡಿಎಸ್ ನಿಂದ ಬಂದವರು. ಆಗ ಸಿದ್ದರಾಮಯ್ಯ.. ಈಗ ಬೊಮ್ಮಾಯಿ. ಜೆಡಿಎಸ್ ನಿಂದ ಕಲಿತು ಕಾಂಗ್ರೆಸ್, ಬಿಜೆಪಿ ಸೇರಿರುವವರು ಸಾಕಷ್ಟು ಜನರಿದ್ದಾರೆ. ಇದೀಗ ಮತ್ತೆ ಹಳೆ ಜೆಡಿಎಸ್ ಮರುಸ್ಥಾಪಿಸಲು ಫ್ಲ್ಯಾನ್ ನಡೆಯುತ್ತಿದೆ. ಅದಕ್ಕಾಗಿ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಹಿಮಾ ಪಾಟೀಲ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹುಬ್ಬಳ್ಳಿಯಲ್ಲಿ ಮಾತನಾಡಿದ್ದು, 90ರ ದಶಕದ ಜೆಡಿಎಸ್ ಪಕ್ಷವನ್ನು ಮರು ಸ್ಥಾಪಿಸಲು ಎಲ್ಲಾ ಪ್ರಯತ್ನಗಳು ನಡೆದಿವೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮತ್ತೆ ಜೆಡಿಎಸ್ ಗೆ ಬಂದರೆ ಅದ್ದೂರಿಯಾಗಿ ಸ್ವಾಗತ ಕೋರುತ್ತೇವೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಲ್ಲಿ ಹೋಗಿ ಸಿಲುಕಿಕೊಂಡಿದ್ದಾರೆ. ನಮ್ಮ ಪಕ್ಷದಲ್ಲಿದ್ದಾಗ ಟಿಕೆಟ್ ಕೊಡುವ ಸ್ಥಾನದಲ್ಲಿದ್ದರು. ಈಗ ಟಿಕೆಟ್ ಗಾಗಿ ಕಾಯುತ್ತಿದ್ದಾರೆ. ಕೇಶವ ಕೃಪಾ ಮತ್ತು ಬಸವ ಕೃಪಾದ ನಡುವೆ ಸಿಲುಕಿಕೊಂಡಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರು ನಮ್ಮಲ್ಲಿದ್ದವರು ಅಲ್ಲಿ ಹೋಗಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋಗಿ ಪಕ್ಷ ಹುಡುಕುವ ಸ್ಥಿತಿ ತಂದುಕೊಂಡಿದ್ದಾರೆ. ಇದು ಅವರ ಸ್ವಯಂಕೃತ ಅಪರಾಧ. ಆದರೂ ನಮಗೆ ಅವರ ಮೇಲೆ ಗೌರವವಿದೆ. ಅವರು ವರುಣಾದಿಂದಾನೇ ಸ್ಪರ್ಧೆ ಮಾಡಿದರೆ ಒಳಿತು. ಕೋಲಾರದಲ್ಲಿ ಬಿಸ್ಮಿಲ್ಲಾ ಮಾಡಿ ಬಿಡುತ್ತಾರೆ ಎಂದಿದ್ದಾರೆ.