ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.09 : ನಗರದಲ್ಲಿ ಭಾನುವಾರ ನಡೆದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಜನ ಕುಣಿದು ಕುಪ್ಪಳಿಸಿದ ಪರಿಣಾಮ ಲೋಡ್‍ಗಟ್ಟಲೆ ಪೇಪರ್ ಪ್ಲೇಟ್, ಪೇಪರ್ ಕಪ್, ಕುಡಿಯುವ ನೀರಿನ ಪ್ಯಾಕೆಟ್, ಪ್ಲಾಸ್ಟಿಕ್ ಐಟಂಗಳು ಎಲ್ಲೆಂದರಲ್ಲಿ ರಾಶಿಗಟ್ಟಲೆ ಹರಡಿಕೊಂಡಿದ್ದವು.
ಬೆಳಗ್ಗೆ 5:30 ರ ವೇಳೆಗೆ ನಗರದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛ ಮಾಡಲು ಸುಮಾರು 100 ಕ್ಕೂ ಹೆಚ್ಚು ನಗರಸಭೆಯ ಪೌರ ಕಾರ್ಮಿಕರು ನಗರದ ಮುಖ್ಯರಸ್ತೆಯಲ್ಲಿ ಎಸೆಯಲಾಗಿದ್ದ ಪೇಪರ್ ಪ್ಲೇಟ್, ಕಪ್‍ಗಳು, ನೀರಿನ ಬಾಟಲಿಗಳು, ಸೇರಿದಂತೆ ಹಲವು ರೀತಿಯ ತ್ಯಾಜ್ಯವನ್ನು ಗುಡಿಸಿ ಲಾರಿಗಳಲ್ಲಿ ಸುರಿದರು. ಬೆಳಿಗ್ಗೆ 10 ಗಂಟೆ ವೇಳೆಗೆ ಅಂದಾಜು 15 ಲೋಡ್ ಕಸವನ್ನು ಸ್ವಚ್ಛಗೊಳಿಸಿದರು.ನಿನ್ನೆ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡ ಜನರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಲಕ್ಷಾಂತರ ಭಕ್ತರು ಹೆಜ್ಜೆ ಹಾಕಿದ್ದರು. ಈ ವೇಳೆ ರಾಶಿ ರಾಶಿಯಾಗಿ ಪಾದರಕ್ಷೆಗಳು, ಪೇಪರ್ ಪ್ಲೇಟ್ ಗಳ , ಕಪ್ರ ಗಳು ಸೇರಿದಂತೆ ವಿವಿಧ ರೀತಿಯ ತ್ಯಾಜ್ಯಗಳು ರಸ್ತೆಯಲ್ಲಿ ಬಿದ್ದಿದ್ದವು.
ಮದಕರಿವೃತ್ತ, ಅಂಬೇಡ್ಕರ್ ವೃತ್ತ, ಎಸ್.ಬಿ.ಎಂ.ವೃತ್ತ, ಗಾಂಧಿವೃತ್ತ, ಸಂಗೊಳ್ಳಿರಾಯಣ್ಣ ವೃತ್ತ ಸೇರಿದಂತೆ ಹೊಳಲ್ಕೆರೆಯ ಕನಕವೃತ್ತದವರೆಗೂ ಅಲ್ಲಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರಿಂದ ಲೋಡ್ ಲೆಕ್ಕದಲ್ಲಿ ಪೇಪರ್ ಪ್ಲೇಟ್, ಕಪ್‍ಗಳನ್ನು ಬಳಸಿ ಮನಸೋಇಚ್ಚೆ ಎಸೆಯಲಾಗಿತ್ತು. ನಗರಸಭೆ ಪೌರಾಯುಕ್ತರಾದ ಶ್ರೀಮತಿ ರೇಣುಕಾ ರವರು ಬೆಳಿಗ್ಗೆಯೇ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ನಿಂತು ಪೌರ ಕಾರ್ಮಿಕರು ಸ್ವಚ್ಚತೆಯಲ್ಲಿ ತೊಡಗಿದ್ದನ್ನು ವೀಕ್ಷಿಸಿದರು.
ಪರಿಸರ ಇಂಜಿನಿಯರ್ ಜಾಫರ್, ಹೆಲ್ತ್ ಇನ್ಸ್‌ಪೆಕ್ಟರ್ ಗಳಾದ ಸರಳ, ಭಾರತಿ, ನಿರ್ಮಲ, ನಾಗರಾಜ್. ಈ. ಸಂದರ್ಭದಲ್ಲಿದ್ದರು.
ಅಲಕಂಕಾರಿಕ ಗಿಡಗಳು : ರಸ್ತೆ ಮಧ್ಯಭಾಗದಲ್ಲಿ ಅಳವಡಿಸಲಾಗಿರುವ ಡಿವೈಡರ್‍ಗಳ ಮೇಲೆ ಉದ್ದಕ್ಕೂ ಸಾವಿರಾರು ಜನ ನಿಂತಿದ್ದರಿಂದ ಅಲಂಕಾರಿಕ ಹೂವಿನ ಗಿಡಗಳು ಹಾಳಾಗಿದ್ದವು.
ಸ್ಟೇಡಿಯಂ ಮುಂಭಾಗದಿಂದ ಹಿಡಿದು ಹೊಳಲ್ಕೆರೆ ರಸ್ತೆಯಲ್ಲಿರುವ ಸಂಗೊಳ್ಳಿರಾಯಣ್ಣ ವೃತ್ತದವರೆಗೂ ರಸ್ತೆ ವಿಭಜಕಗಳ ಮೇಲೆ ಕಂಗೊಳಿಸುತ್ತಿದ್ದ ಬಣ್ಣ ಬಣ್ಣದ ಹೂವಿನ ಅಲಂಕಾರಿಕ ಗಿಡಗಳು ಹಾಳಾಗಿವೆ. ದಿನನಿತ್ಯವು ಬೆಳಗಿನ ಜಾವ ನೀರು ಹಾಯಿಸಿ ಕಾಪಾಡಿದ್ದ ನಗರಸಭೆಯವರು ಕಂಡು ಮಮ್ಮಲ ಮರುಗಿದರು. ಬೆಂಗಳೂರಿನ ಲಾಲ್‍ಬಾಗ್‍ನಿಂದ ತರಿಸಲಾಗಿದ್ದ ಅಲಂಕಾರಿಕ ಹೂವಿನ ಗಿಡಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ತರಿಸಲಾಗಿತ್ತು.