ಪೆಟ್ರೋಲ್‌, ಡೀಸೆಲ್ ಬೆಲೆ ಭಾರೀ ಇಳಿಕೆ ಸಾಧ್ಯತೆ.. ಪ್ರಧಾನಿ ಮೋದಿ ಹೊಸ ವರ್ಷದ ಉಡುಗೊರೆ!

 

ಸುದ್ದಿಒನ್ : ಪೆಟ್ರೋಲ್, ಡೀಸೆಲ್ ಬೆಲೆಯಿಂದ ಸಂಕಷ್ಟದಲ್ಲಿರುವ ಜನತೆಗೆ ಕೇಂದ್ರದ ನರೇಂದ್ರ ಮೋದಿ ಸರಕಾರ ಶುಭ ಸುದ್ದಿ ನೀಡಲಿದೆ. ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ ಗೆ 10 ರೂಪಾಯಿ ಇಳಿಕೆಯಾಗುವ ಸಾಧ್ಯತೆ ಇದೆ. ದೇಶದ ಜನತೆಗೆ ಹೊಸ ವರ್ಷದ ಉಡುಗೊರೆಯಾಗಿ ಪ್ರಧಾನಿ ಮೋದಿ ಈ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಪೆಟ್ರೋಲಿಯಂ ಸಚಿವಾಲಯವು ಈಗಾಗಲೇ ಇಂಧನ ಬೆಲೆ ಇಳಿಕೆ ಸಂಬಂಧ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದು, ಗುರುವಾರ (ಡಿಸೆಂಬರ್ 28) ಪ್ರಸ್ತಾವನೆಗಳನ್ನು ಪರಿಶೀಲಿಸಿ ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ. ನಾಳೆ ಅಥವಾ ನಾಡಿದ್ದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯನ್ನು ಘೋಷಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಮುಂದಿನ ವರ್ಷ ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆಗೆ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಇವುಗಳಲ್ಲದೆ ಹಲವು ರಾಜ್ಯಗಳಲ್ಲಿ ವಿಧಾನಸಭೆಗಳಿಗೂ ಚುನಾವಣೆ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಕೇಂದ್ರದ ಮೋದಿ ಸರ್ಕಾರ ಇಂಧನ ಬೆಲೆ ಇಳಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ.

ಪ್ರಸ್ತುತ ಲೀಟರ್ ಪೆಟ್ರೋಲ್ ಬೆಲೆ ರೂ. 96 ರಿಂದ ರೂ. 112 ವರೆಗೆ. ಗುರುವಾರ (ಡಿಸೆಂಬರ್ 28) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.96.72 ಆಗಿದ್ದರೆ, ಮುಂಬೈನಲ್ಲಿ ರೂ. 111.35. ಅದೇ ರೀತಿ ಲೀಟರ್ ಡೀಸೆಲ್ ಬೆಲೆ ರೂ. 89 ರಿಂದ 100 ರೂ. ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್‌ಗೆ 89.62 ರೂ., ಮುಂಬೈನಲ್ಲಿ ರೂ. 97.28 ಆಗಿದೆ.

ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರೂ.8 ರಿಂದ 10 ರೂಪಾಯಿಗಳಷ್ಟು ಕಡಿಮೆ ಮಾಡಲು ಪೆಟ್ರೋಲಿಯಂ ಸಚಿವಾಲಯವು ಪ್ರಸ್ತಾವನೆಗಳನ್ನು ಸಿದ್ಧಪಡಿಸಿದೆ. ಪ್ರಸ್ತುತ ಅಂತರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿನ ಬೆಲೆಗಳ ಪ್ರಕಾರ ಕೇಂದ್ರ ಸರ್ಕಾರದ ವಲಯದ ತೈಲ ಕಂಪನಿಗಳು ಲಾಭದ ಹಾದಿಯಲ್ಲಿವೆ. ಪ್ರತಿ ಲೀಟರ್‌ಗೆ ರೂ. 10ರಷ್ಟು ಲಾಭ ಬರುತ್ತಿದೆಯಂತೆ. ಈ ಲಾಭವನ್ನು ಜನರಿಗೆ ಹಂಚಲು ಮೋದಿ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ತೈಲ ಕಂಪನಿಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದೆ.

ಈ ಹಿಂದೆ ದೇಶಿಯ ತೈಲ ಕಂಪನಿಗಳು ನಷ್ಟದಲ್ಲಿದ್ದಾಗ ಕೇಂದ್ರವು ಸಬ್ಸಿಡಿ, ಆರ್ಥಿಕ ನೆರವು ನೀಡಿ ನೆರವಿಗೆ ನಿಂತಿತ್ತು. ಈಗ ಲಾಭ ಬರುತ್ತಿರುವುದರಿಂದ ಇಂಧನ ಬೆಲೆ ಇಳಿಕೆಗೆ ಯಾವುದೇ ತೊಂದರೆ ಇಲ್ಲ ಎಂದು ಕೇಂದ್ರ ಭಾವಿಸಿದಂತಿದೆ.

ಕೇಂದ್ರ ಸರ್ಕಾರವು ಕೊನೆಯ ಬಾರಿಗೆ ಮೇ 22, 2022 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ತೆಗೆದುಹಾಕಿತ್ತು. ಪೆಟ್ರೋಲ್ ಮೇಲೆ ರೂ. 8, ಡೀಸೆಲ್ ಮೇಲೆ ರೂ. 6 ತೆರಿಗೆ ದರ ಇಳಿಕೆ ಮಾಡಿತ್ತು. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿತ್ತು. ಅದರ ನಂತರ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ, ಅಂತರಾಷ್ಟ್ರೀಯ ಇಂಧನ ಬೆಲೆಗಳು ಏರಿಕೆ ಕಂಡಾಗ ದೇಶೀಯ ತೈಲ ಕಂಪನಿಗಳು ಬೆಲೆಗಳನ್ನು ಹೆಚ್ಚಿಸಲಿಲ್ಲ. ಪ್ರಸ್ತುತ, ಭಾರತೀಯ ತೈಲ ನಿಗಮ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್‌ನಂತಹ ಭಾರತೀಯ ಸರ್ಕಾರಿ  ಅಧೀನದ ಕಂಪನಿಗಳು ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಕುಸಿತದಿಂದಾಗಿ ಲಾಭದ ಹಾದಿಯಲ್ಲಿವೆ.

Share This Article
Leave a Comment

Leave a Reply

Your email address will not be published. Required fields are marked *