ಬೆಂಗಳೂರು: ಸಾಮಾನ್ಯ ಜನ ಆಸೆಯ ಕಣ್ಣುಗಳಿಂದ ನೋಡುತ್ತಾ ಇದ್ದಾರೆ. ಯಾವಾಗ ದಿನದಿತ್ಯ ಉಪಯೋಗಿಸುವ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗುತ್ತೋ ಅಂತ. ಆದರೆ ಆ ನಿರೀಕ್ಷೆಯೆಲ್ಲಾ ಹುಸಿಯಾಗುತ್ತಲೇ ಇದೆ. ಬೆಲೆ ಏರಿಕೆಯ ಸುದ್ದಿ ಕೇಳಿ ಕೇಳಿ ಜನ ಬೇಸತ್ತು ಹೋಗಿದ್ದಾರೆ. ಇದೀಗ ದಸರಾ ಹಬ್ಬದ ಸಮಯದಲ್ಲಿ ಮತ್ತೊಂದು ಬೆಲೆ ಏರಿಕೆಯ ಬಿಸಿ ಜನರ ತಲೆ ಕೆಡಿಸಿದೆ.
ಇಂದಿನಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರದಲ್ಲಿ ಏರಿಕೆಯಾಗಿದೆ. ಪ್ರತಿ ಯೂಟನಿಟ್ ಮೇಲೂ 23 ಪೈಸೆಯಿಂದ ಹಿಡಿದು 43 ಪೈಸೆಯ ತನಕ ದರ ಏರಿಕೆ ಮಾಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಇಂದಿನಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ ಗೆ 43 ಪೈಸೆ ಹೆಚ್ಚಳ ಮಾಡಲಾಗಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ ಹಾಲಿ ಶುಲ್ಕದ ಮೇಲೆ 24 ಪೈಸೆ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕಿದೆ. ಇನ್ನು ಹೆಸ್ಕಾಂ ಅಡಿಯಲ್ಲಿ ಬರುವ ಗ್ರಾಹಕರಿಗೆ 35 ಪೈಸೆ ಹೆಚ್ಚುವರಿಯಾಗಿದೆ. ಹೆಸ್ಕಾಂ ಹಾಗೂ ಜೆಸ್ಕಾಂ ಅಡಿಯಲ್ಲಿ ಬರುವ ಗ್ರಾಹಕರಿಗೆ 35 ಪೈಸೆ ಹೆಚ್ಚುವರಿಯಾಗಿ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇನ್ನು ಇಂಧನ ಇಲಾಖೆ ವರ್ಷಕ್ಕೆ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಕೆ ಮಾಡಲಿದೆ. ಇದೇ ವರ್ಷದ ಏಪ್ರಿಲ್ ನಲ್ಲಿ ವಿದ್ಯುತ್ ದರ ಏರಿಕೆ ಮಾಡಿತ್ತು. ಇದೀಗ ಅಕ್ಟೋಬರ್ 1ರಿಂದ ಜಾರಿಯಾಗುವಂತೆ ವಿದ್ಯುತ್ ದರ ಏರಿಕೆ ಮಾಡಿದೆ. ಕಲ್ಲಿದ್ದಲು ದರ ಏರಿಕೆಯಾಗಿರುವ ನೆಪವೊಡ್ಡಿ ಈ ಬಾರಿ ವಿದ್ಯುತ್ ದರ ಏರಿಕೆ ಮಾಡಿದೆ.