ಸುದ್ದಿಒನ್, ಚಿತ್ರದುರ್ಗ, ಜುಲೈ. 08 : ಡಾ. ಸರ್. ಎಂ. ವಿಶ್ವೇಶ್ವರಯ್ಯನವರು ಕನ್ನಡದಲ್ಲಿ ಓದಿ ಇಂಜಿನಿಯರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿದೆ ಎಂದು ಜಿ ಎಸ್ ಮಂಜುನಾಥ್ ಹೇಳಿದರು.
ತಾಲ್ಲೂಕಿನ ಭೀಮಸಮುದ್ರ ಸಮೀಪದ ಹಿರೇಗುಂಟನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಪ್ರಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ಮಾತೃಭಾಷೆ, ನಾವು ಅದನ್ನು ಗೌರವಿಸಬೇಕು. ನಮ್ಮ ತಂದೆಯವರು ಶಾಸಕರಾಗಿದ್ದರು. ನಮ್ಮನ್ನ ಸರ್ಕಾರಿ ಶಾಲೆಯಲ್ಲಿ ಸೇರಿಸಿ ಕನ್ನಡದಲ್ಲಿ ಓದಿಸಿದ್ದಾರೆ. ನಾವೆಲ್ಲ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್ ಎನ್ನುವುದು ತಂದೆ ತಾಯಿಗಳಿಗೆ ವ್ಯಾಮೋಹವಾಗಿದೆ. ಹಿಂದಿನ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಸ್ಥಾನದಲ್ಲಿದ್ದಾರೆ. ಸರ್ಕಾರದ ಆದೇಶದಂತೆ ಇಂಗ್ಲೀಷ್ ಮಾಧ್ಯಮ ತೆರೆದಿರುವುದು ಬಹಳ ಸಂತೋಷಕರ ವಿಷಯ. ಕನ್ನಡದಲ್ಲಿ 53 ಅಕ್ಷರಗಳಿವೆ. ಆದರೆ ಇಂಗ್ಲಿಷ್ ನಲ್ಲಿರುವುದು 26. ಆದರೂ ಕೂಡ ನಮಗೆ ಇಂಗ್ಲೀಷ್ ಹೆಚ್ಚು. ಹಳೆಯ ಕಾಲಕ್ಕೂ ಈಗಿನ ಕಾಲಕ್ಕೂ ತುಂಬಾ ವ್ಯತ್ಯಾಸಗಳಿವೆ. ಬೇರೆ ಭಾಷೆ ಪರಿಹಾರ ಅಷ್ಟೇ. ಮಕ್ಕಳಲ್ಲಿ ಒಂದು ವಿನಂತಿ ಸರ್ಕಾರ ಕೊಟ್ಟಿರುವ ಅವಕಾಶವನ್ನು ಬಳಸಿಕೊಳ್ಳಿ. ಮುಂದೆ ವಿದ್ಯಾವಂತರಾಗಿ ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಹೆಸರು ತರಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಶ್ರೀಮತಿ ನವೀನ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವಸಂತ್, ಜಾಕಿರ್, ಕುಮಾರಸ್ವಾಮಿ, ಮಲ್ಲಿಕಾರ್ಜುನ್, ಮಂಜುನಾಥ್, ಬಾಬು, ಪ್ರಸಾದ್, ಮುಖ್ಯ ಶಿಕ್ಷಕರಾದ ಎಚ್ ಆನಂದಪ್ಪ, ಎಸ್ ಡಿ ಎಮ್ ಸಿ ಸದಸ್ಯರುಗಳು ಹಾಗೂ ಶಿಕ್ಷಕಿಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
















