ಶ್ರಮವಹಿಸಿ ಕೆಲಸ ಮಾಡುವುದರಿಂದ ಜನರ ಪ್ರೀತಿ ಸಂಪಾದಿಸಲು ಸಾಧ್ಯ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

2 Min Read

ಚಿತ್ರದುರ್ಗ,ಆಗಸ್ಟ್ 17: ಅಧೀಕ್ಷಕ ಅಭಿಯಂತರರಾಗಿ ಪದೋನ್ನತಿ ಹೊಂದಿದ ಎನ್. ಸತೀಶ್‍ಬಾಬು ಅವರ ಕಾರ್ಯವೈಖರಿ ಮೆಚ್ಚುವಂತದ್ದು. ಅವರು ಅದ್ಭುತವಾಗಿ ಕೆಲಸ ನಿರ್ವಹಿಸಿದ್ದಾರೆ. ನಾವು ನಿಕಟವಾಗಿ ಅವರೊಂದಿಗೆ ಕೆಲಸ ನಿರ್ವಹಿಸಿದ್ದೇವೆ. ಯಾವಾಗಲೂ ಹಸನ್ಮುಖಿಯಾಗಿ ಶ್ರಮವಹಿಸಿ ಕೆಲಸ ಮಾಡಿದ್ದರಿಂದ ಜನರ ಪ್ರೀತಿ ಸಂಪಾದಿಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಚಿತ್ರದುರ್ಗ ಲೋಕೋಪಯೋಗಿ ಇಲಾಖೆ,  ವಿಭಾಗ ಉಪವಿಭಾಗಗಳು, ಕರ್ನಾಟಕ ಇಂಜಿನಿಯರ್‍ಗಳ ಸಂಘ ಜಿಲ್ಲಾ ಶಾಖೆ, ಜಿಲ್ಲಾ ಗುತ್ತಿಗೆದಾರ ಸಂಘ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾರೆಡ್ಡಿ ಅವರಿಗೆ ಸನ್ಮಾನ ಮತ್ತು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಎನ್.ಸತೀಶ್ ಬಾಬು ಅವರು ಅಧೀಕ್ಷಕ ಅಭಿಯಂತರರಾಗಿ ಪದೋನ್ನತಿ ಹೊಂದಿರುವುದರಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ಸತೀಶ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗೆಯೇ  ಮುಂದಿನ ಎಲ್ಲಾ ಕಾರ್ಯಗಳನ್ನೂ ಉತ್ತಮವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿ ದೇವಿ ಮಾತನಾಡಿ,  ಜಿಲ್ಲಾ ಪಂಚಾಯತ್‍ನಿಂದ ನೀಡಿದಂತಹ ಕೆಲಸ, ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕೆಲಸ ನಿರ್ವಹಿಸಿಕೊಂಡು ಹೋಗಬೇಕು ಎಂದು ಆಶಯವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾ ರೆಡ್ಡಿ  ಮಾತನಾಡಿ, ಸತೀಶ್ ಅವರು ಉತ್ತಮವಾಗಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ನಾನು ಯಾವುದೇ ಕಾರ್ಯ ನಿರ್ವಹಿಸಿದರೂ ಸರ್ಕಾರದ ಸೇವಕನಾಗಿ ಕೆಲಸ ಮಾಡಿದ್ದೇನೆ. ಸಾರ್ವಜನಿಕರ ಕೆಲಸಗಳನ್ನು ಮಾಡಲು ಸರ್ಕಾರ ನಮ್ಮನ್ನು ನೇಮಿಸಿದೆ. ಈ ಊರಿನ ನೀರಿನ ಋಣ ತೀರಿಸುವುದು ಸುಲಭದ ಮಾತಲ್ಲ. ಗ್ರಾಮೀಣ ಭಾಗದ ಜನರಿಗೆ ಸಹಾಯ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾನು ಸಹ ಗ್ರಾಮೀಣ ಪ್ರದೇಶದಿಂದ ಬಂದಿದ್ದೇನೆ. ಗ್ರಾಮೀಣ ಭಾಗದ ಸಮಸ್ಯೆಗಳು ನನಗೆ ಗೊತ್ತು. ಹಾಗಾಗಿ ಗ್ರಾಮೀಣ ಪ್ರದೇಶಗಳತ್ತ ಹೆಚ್ಚಿನ ಆದ್ಯತೆ ನೀಡಿ ಕೆಲಸ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.

ಅಧೀಕ್ಷಕ ಅಭಿಯಂತರ ಎನ್.ಸತೀಶ್ ಬಾಬು ಮಾತನಾಡಿ, ಚಿತ್ರದುರ್ಗದಲ್ಲಿ ಉತ್ತಮ ರೀತಿಯ ಕೆಲಸ ನಿರ್ವಹಿಸಬೇಕೆಂದು ಲೋಕೋಪಯೋಗಿ ಇಲಾಖೆಯ  ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೃಷ್ಣಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಇದು ನನಗೆ ತುಂಬಾ ಸಂತೋಷ ನೀಡಿದೆ ಇದರ ಜೊತೆಗೆ ಈ ಜಿಲ್ಲೆಯ ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ಉತ್ತಮವಾದ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ಭದ್ರಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಎಂ.ರವಿ, 1ನೇ ದರ್ಜೆ ಗುತ್ತಿಗೆದಾರರು ಹಾಗೂ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಆರ್.ಮಂಜುನಾಥ್, ಶಿವಮೊಗ್ಗದ ಸಂಪರ್ಕ ಮತ್ತು ಕಟ್ಟಡ (ಕೇಂದ್ರ) ಮುಖ್ಯ ಇಂಜಿನಿಯರ್ ಬಿ.ಟಿ.ಕಾಂತರಾಜು, ಶಿವಮೊಗ್ಗ ವೃತ್ತ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರರಾದ ಕೆ.ಜಿ.ಜಗದೀಶ್, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಭದ್ರಾ ಮೇಲ್ದಂಡೆ ಯೋಜನಾ ವಲಯದ ಅಧೀಕ್ಷಕ ಅಭಿಯಂತರರಾದ ಶಿವಪ್ರಕಾಶ್, ಶಿವಮೊಗ್ಗದ ಸಂಪರ್ಕ ಮತ್ತು ಕಟ್ಟಡ (ಕೇಂದ್ರ)ದ ಅಧೀಕ್ಷಕ ಅಭಿಯಂತರರಾದ ಟಿ.ಪ್ರದೀಪ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸುಧಾ, ಲೋಕೋಪಯೋಗಿ ಇಲಾಖೆಯ ನಿಯೋಜಿತ ಕಾರ್ಯಪಾಲಕ ಅಭಿಯಂತರ ಟಿ.ಎಸ್.ಮಲ್ಲಿಕಾರ್ಜುನ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *