ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜೂ.27) : ರಾಜ್ಯಾದ್ಯಂತ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಸಂಚರಿಸಲು ಪಾಸ್ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘ ಹಾಗೂ ಮಂಜುನಾಥ ವಿಕಲಚೇತನರ ಕ್ಷೇಮಾಭಿವೃದ್ದಿ ಸೇವಾ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪತ್ರಾಂಕಿತ ಸಹಾಯಕರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವಿಕಲಚೇತನರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ವಿಕಲಚೇತನರಿಂದ 660 ರೂ.ಗಳನ್ನು ಪಡೆದು ನೂರು ಕಿ.ಮೀ.ವ್ಯಾಪ್ತಿಯೊಳಗೆ ಸಂಚರಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿದೆ.
ಅಂಗವಿಕಲರು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಉಚಿತ ಸಂಚಾರಕ್ಕೆ ಬಸ್‍ಪಾಸ್ ವಿತರಿಸಬೇಕು.
ಪ್ರತಿ ತಿಂಗಳ ಮಾಶಾಸನವನ್ನು ಮೂರು ಸಾವಿರ ರೂ.ನಿಂದ ಐದು ಸಾವಿರ ರೂ.ಗಳಿಗೆ ಹೆಚ್ಚಿಸಬೇಕು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂ, ತಾಲ್ಲೂಕು ಪಂ, ಜಿಲ್ಲಾ ಪಂಚಾಯಿತಿಗಳಲ್ಲಿ ವಿಕಲಚೇತನರಿಗೆ ಶೇ.ಐದರಷ್ಟು ಅನುದಾನ ಜಾರಿಯಲ್ಲಿದ್ದರೂ ಅಂಗವಿಕಲರಿಗೆ ತಲುಪುತ್ತಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಎಲ್ಲಾ ವಸತಿ ನಿಗಮಗಳ ಯೋಜನೆಗಳಲ್ಲಿ ವಿಕಲಚೇತನರಿಗೆ ಕಡ್ಡಾಯವಾಗಿ ವಸತಿ ಸೌಲಭ್ಯ ಒದಗಿಸಬೇಕು.
ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಎಲ್ಲಾ ಇಲಾಖೆಗಳಲ್ಲಿ ವಿಕಲಚೇತನರಿಗೂ ಉದ್ಯೋಗ ಸಿಗಬೇಕು.
ಪ್ರತಿ ತಿಂಗಳು ಜಿಲ್ಲಾಧಿಕಾರಿಗಳು ಸಭೆ ಕರೆದು ವಿಕಲಚೇತನರ ಕುಂದು ಕೊರತೆಗಳನ್ನು ಆಲಿಸಬೇಕೆಂಬ ಸರ್ಕಾರದ ಆದೇಶವಿದ್ದರೂ ಇದುವರೆವಿಗೂ ಸಭೆ ಕರೆದಿಲ್ಲ. ಹಾಗಾಗಿ ಇನ್ನು ಮುಂದೆ ಪ್ರತಿ ತಿಂಗಳು ಸಭೆ ಕರೆಯುವಂತೆ ಒತ್ತಾಯಿಸಿದರು.
ಮಂಜುನಾಥ ವಿಕಲಚೇತನರ ಕ್ಷೇಮಾಭಿವೃದ್ದಿ ಸೇವಾ ಸಂಘದ ಅಧ್ಯಕ್ಷ ಟಿ.ಬಿ.ಮಾರುತಿ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಪಾಪಯ್ಯ, ಜೈಪ್ರಕಾಶ್ ಇನ್ನು ಅನೇಕ ವಿಕಲಚೇತನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ದಲಿತ ಮುಖಂಡ ಬಿ.ರಾಜಪ್ಪ, ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೇಜಾನ್ ಇವರುಗಳು ವಿಕಲಚೇತನರಿಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.