ಬಿಜೆಪಿಗೆ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ :  ಹನುಮಲಿ ಷಣ್ಮುಖಪ್ಪ

suddionenews
2 Min Read

ಚಿತ್ರದುರ್ಗ : ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ.ಸರ್ಕಾರದ ವಿರುದ್ದ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಹನುಮಲಿ ಷಣ್ಮುಖಪ್ಪನವರು ತಮ್ಮ ನಿವಾಸದ ಎದುರು ಗುರುವಾರ ಅಡುಗೆ ಅನಿಲವನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಂತರ ಮಾತನಾಡಿದ ಹನುಮಲಿ ಷಣ್ಮುಖಪ್ಪ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಿದ್ದುದರಿಂದ ನಾಲ್ಕು ತಿಂಗಳಿನಿಂದ ಯಾವುದೇ ಬೆಲೆ ಏರಿಕೆ ಮಾಡದೆ ಬಡವರ ಪರವಾಗಿದ್ದೇವೆಂದು ದೇಶದ ಜನತೆಯನ್ನು ವಂಚಿಸಿಕೊಂಡು ಬಂದ ಪ್ರಧಾನಿ ನರೇಂದ್ರ ಮೋದಿ ದಿಢೀರನೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಸಿ ಬಡವರು, ಮಧ್ಯಮ ವರ್ಗದವರು, ಶ್ರೀಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಪ್ಪಿತಪ್ಪಿ ಬೆಲೆ ಏರಿಕೆಯಾದರೆ ಇದೆ ಬಿಜೆಪಿ.ಯವರು ತಲೆಯ ಮೇಲೆ ಅಡುಗೆ ಅನಿಲ ಹೊತ್ತು ಪ್ರತಿಭಟನೆ ನಡೆಸುತ್ತಿದ್ದುದನ್ನು ಮರೆತಂತಿದೆ ಎಂದು ವ್ಯಂಗ್ಯವಾಡಿದರು.

ಪೆಟ್ರೋಲ್ ಲೀಟರ್‌ಗೆ 105, ಡೀಸೆಲ್-95 ರೂ. ಅಡುಗೆ ಅನಿಲ 1110 ರೂ.ಗಳಾಗಿದೆ. ಇದರಿಂದ ಜನಸಾಮಾನ್ಯರು ಬದುಕುವುದಾದರೂ ಹೇಗೆ ಎಂದು ಕೋಮುವಾದಿ ಬಿಜೆಪಿ.ಯವರನ್ನು ಪ್ರಶ್ನಿಸಿದ ಹನುಮಲಿ ಷಣ್ಮುಖಪ್ಪ ಕೇಂದ್ರ ಸರ್ಕಾರ ಕೂಡಲೆ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಕಳೆದ ಹದಿನೈದು ದಿನಗಳಿಂದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೊಂದಣಿಗೆ ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಮನವರಿಕೆ ಮಾಡಿ ಬಿಜೆಪಿ.ದುರಾಡಳಿತದ ವಿರುದ್ದ ತಿಳಿಸುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ.ದುರಾಡಳಿತದಿಂದ ಜನ ಬೇಸತ್ತು ಬದಲಾವಣೆ ಬಯಸುತ್ತಿದ್ದಾರೆ. ಹಾಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ.

ಹಿಜಾಬ್ ಕ್ಯಾತೆ ತೆಗೆದಿದ್ದಾಯಿತು. ಈಗ ಮುಸ್ಲಿಂ ಅಂಗಡಿಗಳಲ್ಲಿ ಹಲಾಲ್ ಮಟನ್ ಖರೀಧಿಸಬೇಡಿ, ಜಾತ್ರೆಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬಾರದೆಂಬ ತಗಾದೆ ತೆಗೆಯುತ್ತಿದ್ದಾರೆ. ಒಟ್ಟಾರೆ ಹಿಂದೂ-ಮುಸಲ್ಮಾನರ ಭಾವೈಕ್ಯತೆಗೆ ಧಕ್ಕೆ ತರಲು ಹೊರಟಿರುವ ಬಿಜೆಪಿ.ಯವರಿಗೆ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಹನುಮಲಿ ಷಣ್ಮುಖಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‌ಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷಿö್ಮಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಕರಿಯಪ್ಪ, ಮೂಡಲಗಿರಿಯಪ್ಪ, ಶಶಿ ಇವರುಗಳು ಪ್ರತಿಭಟನೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *