ರಾಜ್ಯದ ಜನ ಬಿಜೆಪಿಯವರ ನಯವಂಚಕ ಮಾತುಗಳಿಗೆ ಮರಳಾಗುವುದಿಲ್ಲ : ಸಚಿವ ಆರ್.ಬಿ.ತಿಮ್ಮಾಪುರ್

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜೂ.22) : ಕೇಂದ್ರ ಸಚಿವ ಸಂಪುಟದಲ್ಲಿರುವ ಸಚಿವರುಗಳಿಗೆ ಕಿಂಚಿತ್ತು ಕಿಮ್ಮತ್ತು ನೀಡದ ಪ್ರಧಾನಿ ಮೋದಿ ಹಿಟ್ಲರ್‌ ನಂತೆ ಅಧಿಕಾರ ಚಲಾಯಿಸುತ್ತಿದ್ದಾರೆಯೇ ವಿನಃ  ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷ ಎಂದಿಗೂ ಏಕಚಕ್ರಾಧಿಪತಿಯಂತೆ ಅಧಿಕಾರ ಚಲಾಯಿಸುವುದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಬಿಜೆಪಿ ಯವರ ಟೀಕೆಗಳಿಗೆ ತಿರುಗೇಟು ನೀಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಆರು ನೂರು ಯೋಜನೆಗಳನ್ನು ಘೋಷಿಸಿ ಕೇವಲ 50 ಯೋಜನೆಗಳನ್ನು ಜಾರಿಗೆ ತರದ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುವ ಹಕ್ಕಿಲ್ಲ. ಕೇಂದ್ರದಲ್ಲಿರುವ ಬಹುತೇಕ ಸಚಿವರುಗಳಿಗೆ ಅವರವರ ಖಾತೆಯಲ್ಲಿ ಏನೇನು ಯೋಜನೆಗಳಿವೆ ಎನ್ನುವುದೇ ಗೊತ್ತಿಲ್ಲ.

ಪ್ರಧಾನಿ ಮೋದಿ ಅಷ್ಟರ ಮಟ್ಟಿಗೆ ತಮ್ಮ ಹಿಡಿತ ಸಾಧಿಸುತ್ತಿದ್ದಾರೆ. ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಐದು ಉಚಿತ ಗ್ಯಾರೆಂಟಿಗಳನ್ನು ಘೋಷಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದನ್ನು ನೋಡಿ ಪ್ರಧಾನಿ ಮೋದಿಗೆ ಸಹಿಸಿಕೊಳ್ಳಲು ಆಗದೆ ಅನ್ನಭಾಗ್ಯ ಯೋಜನೆಗೆ ಕರ್ನಾಟಕಕ್ಕೆ ಅಕ್ಕಿ ಕೊಡಬೇಡಿ ಎಂದು ಎಲ್ಲಾ ರಾಜ್ಯಗಳಿಗೂ ತಾಕೀತು ಮಾಡುತ್ತಿದ್ದಾರೆ. ಇದರಿಂದ ಸ್ವಲ್ಪ ತಡವಾಗಬಹುದು. ಆದರೆ ಅನ್ನಭಾಗ್ಯ ಯೋಜನೆ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದರು.

ಅಹಿಂದ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಶೋಭ ಕರಂದ್ಲಾಜೆ ಲಘುವಾಗಿ ಮಾತನಾಡಿರುವುದನ್ನು ಗಮನಿಸಿದರೆ ಅವರ ತಲೆಯಲ್ಲಿ ಬ್ರೈನ್ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಯಾವ ಹಳ್ಳಿಗೆ ಹೋದರೂ ರಾಜ್ಯಕ್ಕೆ ಅಕ್ಕಿ ಕೊಡಲು ಏಕೆ ಅಡ್ಡಿಪಡಿಸುತ್ತಿದ್ದೀರ ಎಂದು ಜನ ಪ್ರಶ್ನಿಸಿ ಎಲ್ಲಿ ತರಾಟೆ ತೆಗೆದುಕೊಳ್ಳುತ್ತಾರೋ ಎನ್ನುವ ಭಯ ಬಿಜೆಪಿಗೆ ಕಾಡುತ್ತಿರುವುದರಿಂದ ಐದು ಉಚಿತ ಗ್ಯಾರೆಂಟಿಗಳ ಕುರಿತು ಇಲ್ಲ ಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯದ ಜನ ಇನ್ನು ಮಂದೆ ಬಿಜೆಪಿಯವರ ನಯವಂಚಕ ಮಾತುಗಳಿಗೆ ಮರಳಾಗುವವರಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *