ಬೆಂಗಳೂರು: ಸ್ವಾತಂತ್ರ್ಯ ಬಂದು 75 ವರ್ಷ. ಈ ದಿನವನ್ನು ಅಮೃತ ಮಹೋತ್ಸವವಾಗಿ ಆಚರಣೆ ಮಾಡಲಾಗುತ್ತಿದೆ. ಜೊತೆಗೆ ಕಾಂಗ್ರೆಸ್ ಪಕ್ಷ ಬೃಹತ್ ನಡಿಗೆಯನ್ನೇ ಹಮ್ಮಿಕೊಂಡಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬದ ರೀತಿ ನಡೆಸಬೇಕೆಂದು ಕಾಂಗ್ರೆಸ್ ಫ್ರೀಡಂ ಮಾರ್ಚ್ ಗೆ ಕರೆಕೊಟ್ಟಿತ್ತು. ಆ ಕರೆಗೆ ಹೂಗೊಟ್ಟು ಈಗಾಗಲೇ ಸಾವಿರಾರು ಮಂದಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸೇರಿದ್ದಾರೆ. ಫ್ರೀಡಂ ಮಾರ್ಚ್ ಆರಂಭವಾಗುವುದಕ್ಕೆ ಇನ್ನು ಸಮಯವಿದ್ದು, ಇನ್ನಷ್ಟು ಜನ ಸೇರಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಭಾಗಿಯಾಗಲಿದ್ದಾರೆ.
ಈ ನಡಿಗೆಯಲ್ಲಿ ಲಕ್ಷಾಂತರ ಜನ ಹೆಜ್ಜೆ ಹಾಕುವ ನಿರೀಕ್ಷೆ ಇದೆ. ಕಾರ್ಯಕರ್ತರು, ಬೆಂಬಲಿಗರು, ಸಾಮಾನ್ಯ ಜನ ಎಲ್ಲಾ ಸೇರಲಿದ್ದಾರೆ. ಹೀಗಾಗಿ ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ, ನಗರದಲ್ಲೂ ಹೆಚ್ಚು ಟ್ರಾಫಿಕ್ ಕಿರಿಕಿರಿಯಾಗದಂತೆ ನಗರದ ಹೊರ ವಲಯದಿಂದಲೇ ಬಸ್ ಗಳ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ಜಿಲ್ಲೆಗಳಿಂದ ಜನ ಬರುತ್ತಿದ್ದು, ತುಮಕೂರು ಜಿಲ್ಲೆಯ ಸುತ್ತಮುತ್ತ ಬರುವವರಿಗೆ ನಾಗಸಂದ್ರ ಮೆಟ್ರೋ ಬಳಿ, ರಾಮನಗರ, ಮಂಡ್ಯ ಈ ಕಡೆಯಿಂದ ಬರುವವರಿಗೆ ಕೆಂಗೇರಿ ಮೆಟ್ರೋ ಸ್ಟೇಷನ್ ಬಳಿ ವ್ಯವಸ್ಥೆ ಮಾಡಲಾಗಿದೆ.
ಹಾಗೇ ಒಂದೊಂದು ಮೆಟ್ರೋ ಸ್ಟೇಷನ್ ಬಳಿ ಇನ್ನೂರಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಆಯೋಜನೆ ಮಾಡಲಾಗಿದೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಸುಮಾರು ಏಳೂವರೆ ಕಿಲೋ ಮೀಟರ್ ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ. ಬೃಹತ್ ನಡಿಗೆಯಲ್ಲಿ ಯಾವುದೇ ರಾಜಕೀಯ ಘೋಷಣೆಗಳಿರುವುದಿಲ್ಲ. ದೇಶಪ್ರೇಮಕ್ಕೆ ಸೀಮಿತವಾಗಿರುತ್ತದೆ. ಅದಕ್ಕಾಗಿ ಎಲ್ಲರ ಕೈನಲ್ಲೂ ಒಂದೊಂದು ಬಾವುಟ ಕೊಡಲಾಗಿದೆ.