ಚಿತ್ರದುರ್ಗ,(ನ.14) : 40 ವರ್ಷ ಮೇಲ್ಪಟ್ಟವರು ತಪ್ಪದೇ 6 ತಿಂಗಳಿಗೊಮ್ಮೆ ವೈದ್ಯರ ಸಲಹೆಯಂತೆ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಚಿತ್ರದುರ್ಗ ತಾಲ್ಲೂಕು ಭರಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕರಿಯಪ್ಪ ಸಲಹೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ವಿಶ್ವ ಮಧುಮೇಹ ದಿನದ ಅಂಗವಾಗಿ ಮಾಹಿತಿ ಶಿಕ್ಷಣದೊಂದಿಗೆ ಮಧುಮೇಹ ಪರೀಕ್ಷೆ ರಕ್ತದೊತ್ತಡ ಪರೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗಾಗಿ ಆರೋಗ್ಯ ಕ್ಷೇಮ ಕೇಂದ್ರ ತೆರೆದಿದೆ. ಅಲ್ಲಿರುವ ಸಮುದಾಯ ಆರೋಗ್ಯಾಧಿಕಾರಿ ಉಚಿತವಾಗಿ ತಪಾಸಣೆ ಮಾಡುತ್ತಾರೆ. ಯೋಗ ಶಿಕ್ಷಕರು ವ್ಯಾಯಾಮಗಳನ್ನು ಹೇಳಿಕೊಡುತ್ತಾರೆ. ಜೀವನಶೈಲಿ ಬದಲಿಸಿಕೊಂಡು ಸಕ್ಕರೆ ಕಾಯಿಲೆ ನಿಯಂತ್ರಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಜನರು ವೈದ್ಯರ ಬಳಿ ಕಣ್ಣು ಮಸುಕು ಮಸುಕಾಗಿ ಕಾಣುತ್ತದೆ. ಕಾಲುಗಳು ಉರಿಯುತ್ತವೆ, ಸುಸ್ತು ಬಹಳ ಹಸಿವಾಗುತ್ತದೆ, ರಾತ್ರಿ ಮೂತ್ರ ಜಾಸ್ತಿಯಾಗುತ್ತದೆ ಇನ್ನು ಹಲವು ಕಾರಣಗಳನ್ನು ಹೇಳುತ್ತಾರೆ. ಈಗಾಗಲೇ ಈ ಸ್ಥಿತಿ ಇರುವವರಿಗೆ ಮಧುಮೇಹ ಬಂದಿರುತ್ತದೆ. ಪರೀಕ್ಷೆ ಮಾಡಿಸಿರುವುದಿಲ್ಲ ಮಧುಮೇಹಕ್ಕೆ ಆತಂಕ ಬೇಡ.
ಸರಿಯಾದ ಆರೈಕೆ ಮಾಡಿಕೊಳ್ಳಿ ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ಪ್ರವೀಣ್ ಮಾತನಾಡಿ, ಕಾಲ ಕಾಲಕ್ಕೆ ತಪಾಸಣೆ, ವೈದ್ಯರ ಸಲಹೆಯಂತೆ ಚಿಕಿತ್ಸೆ ಊಟೋಪಚಾರದ ಕ್ರಮ. ಲಘು ವ್ಯಾಯಾಮದ ಅನುಪಾಲನೆ ಮಾಡಿದರೆ ಮಧುಮೇಹ ನಿಯಂತ್ರಣ ಮಾಡಬಹುದು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ನವೆಂಬರ್ 14 ಮಧುಮೇಹಕ್ಕೆ ಜೀವರಕ್ಷಕ ಇನ್ಸುಲಿನ್ ಕಂಡುಹಿಡಿದ ವಿಜ್ಞಾನಿ ಡಾ.ಫೆಡ್ರಿಕ್ ಬ್ಯಾಂಟಿಂಗ್‍ರವರ ಜನ್ಮ ದಿನದ ನೆನಪಿಗಾಗಿ ಈ ದಿನವನ್ನು ವಿಶ್ವ ಮಧುಮೇಹ ದಿನವೆಂದು ಜೀವನಶೈಲಿ ಆಹಾರಶೈಲಿ ಬದಲಾವಣೆ ಮಾಹಿತಿ ಶಿಕ್ಷಣವನ್ನು ನೀಡಲಾಗಿದೆ.
ನಾವು ಸೇವಿಸುವ ಆಹಾರದಲ್ಲಿ ಹೆಚ್ಚು ನಾರುಬೇರು ಇರುವ ತರಕಾರಿ ಸೊಪ್ಪು ದ್ವಿದಳ ಧಾನ್ಯಗಳನ್ನು ಅನ್ನ ಮುದ್ದೆ ಚಪಾತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ನಿಯಮಿತವಾಗಿ ತಪಾಸಣೆ ವೈದ್ಯರ ಸಲಹೆಯಂತೆ ಔಷಧ ಕ್ರಮ, ನಿತ್ಯ ವ್ಯಾಯಾಮ ಮಾಡಿ ನಮ್ಮ ನಾಳೆಯ ಆರೋಗ್ಯಕ್ಕೆ ಶಿಕ್ಷಣ ಅವಶ್ಯಕತೆ ಇದೆ ಎಂದರು. ಇದೇ ಸಂದರ್ಭದಲ್ಲಿ 45ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಳಾದ ಹೆಚ್.ಆಂಜನೇಯ, ಶ್ರೀಧರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಪ್ರಯೋಗ ಶಾಲಾ ತಂತ್ರಜ್ಞಾನಾಧಿಕಾರಿ ಸತೀಶ್, ರಮೇಶ್, ಸಮುದಾಯ ಆರೋಗ್ಯಾಧಿಕಾರಿ ಪ್ರತಿಭಾ, ಆರೋಗ್ಯ ಸುರಕ್ಷತಾಧಿಕಾರಿ ರೂಪ, ಯೋಗ ಶಿಕ್ಷಕರು, ಇತರರು ಭಾಗವಹಿಸಿದ್ದರು.