ಬೆಂಗಳೂರು: ಚಳಿಯನ್ನೇ ತಡೆದುಕೊಳ್ಳಲು ಆಗ್ತಿಲ್ಲ. ಹೀಗಿರುವಾಗ ಮಳೆಯ ವಾತಾವರಣ ಬೇರೆ ಹಿರಗೆ ಹೋಗುವುದಕ್ಕೇನೆ ಕಷ್ಟವಾದಂತ ಪರಿಸ್ಥಿತಿ ನಿರ್ಮಾಣ ಮಾಡಿದೆ. ತಮಿಳುನಾಡಿನ ಪುದುಚೇರಿಗೆ ಪೆಂಗಲ್ ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಆಗಿದೆ. ತಮಿಳುನಾಡು, ಚೆನ್ನೈ ಮಾತ್ರವಲ್ಲದೆ ಕರ್ನಾಟಕದ ಹಲವೆಡೆ ಹೆಚ್ಚು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಐದು ದಿನ ಅಂದ್ರೆ ಡಿಸೆಂಬರ್ 5ರವರೆಗೂ ಮೈಕೊರೆವ ಚಳಿ ಇರಲಿದೆ ಎಂದು ಹೇಳಲಾಗಿದೆ.
ಇದರ ಜೊತೆಗೆ ರಾಜ್ಯದಲ್ಲಿ ಹಲವೆಡೆ ಯೆಲ್ಲೋ ಹಾಗೂ ರೆಡ್ ಅಲರ್ಟ್ ಅನ್ನು ನೀಡಿದೆ. ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ಮೂರು ದಿನಗಳ ಕಾಲ ಉಡುಪಿ, ದಕ್ಷಿಣ ಕನ್ನಡ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಡಿಸೆಂಬರ್ 3ಕ್ಕೆ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ವಿಪರೀತ ಗಾಳಿ ಸಮೇತ ಅತ್ಯಧಿಕ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.
ಹಾಗೇ ಡಿಸೆಂಬರ್ 5ರಂದು ಉತ್ತರ ಕನ್ನಡ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಮಧ್ಯಾಹ್ನದಿಂದಾನೇ ಮಳೆ ಶುರುವಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಚಳಿಯ ಜೊತೆಗೆ ಮಳೆಯೂ ಆಗುತ್ತಿರುವ ಕಾರಣ, ವೀಕೆಂಡ್ ಆದ್ರೂ ಕೂಡ ಹೊರಗೆ ಬರಲು ಜನ ಚಿಂತಿಸುವಂತಾಗಿದೆ. ಶಾಪಿಂಗ್, ಸಿನಿಮಾ ಅಂತ ಓಡಾಡುತ್ತಿದ್ದ ಮಂದಿ ಬೆಚ್ಚಗೆ ಒದ್ದು ಮಲಗಿಕೊಳ್ಳುವ ಪ್ಲ್ಯಾನ್ ರೂಪಿಸಿದ್ದಾರೆ. ಇನ್ನು ಐದು ದಿನಗಳ ಕಾಲ ಇದೇ ರೀತಿ ಚಳಿ ಮಳೆ ಇದ್ದು, ಎಚ್ಚರಿಕೆಯಿಂದ ಇರಬೇಕಾಗಿದೆ.