ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಏಪ್ರಿಲ್07) : ವಿಶೇಷ ಚೇತನರು ಮತ್ತು 80 ವರ್ಷ ಮೇಲ್ಪಟ್ಟವರ ಮತದಾನಕ್ಕಾಗಿ ಬಿ.ಎಲ್.ಒ ಮೇಲ್ವಿಚಾರಕರ ಜೊತೆ ರೂಟ್ ಮ್ಯಾಪ್ ತಯಾರಿಸಿಟ್ಟುಕೊಳ್ಳಬೇಕು ಹಾಗೂ ನಿಗದಿಪಡಿಸಿದ ಮತದಾನದ ದಿನಾಂಕ (2023 ರ ಮೇ 10) ಕ್ಕೆ ಐದು ದಿನ ಮುಂಚಿತವಾಗಿ ಪಿಬಿ ಮತದಾನ (ಅಂಚೆ ಮತದಾನ) ನಡೆಯಬೇಕು. ಈ ಎಲ್ಲಾ ಪ್ರಕ್ರಿಯೆಗಳು ಸೆಕ್ಟರ್ ಅಧಿಕಾರಿಗಳ ಸಂಪೂರ್ಣ ನಿಗಾವಣೆಯಲ್ಲಿಯೇ ನಡೆಯಬೇಕು ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಆರ್.ಚಂದ್ರಯ್ಯ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸೆಕ್ಟರ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
12ಡಿ ಮತದಾರರು (ವಿಶೇಷ ಚೇತನ ಮತ್ತು 80 ವರ್ಷ ಮೇಲ್ಪಟ್ಟವರು) ಮತದಾನದ ಸಮಯದಲ್ಲಿ ಯಾವುದೇ ರೀತಿಯಲ್ಲಿ ಮತದಾನದ ರಹಸ್ಯ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸೆಕ್ಟರ್ ಅಧಿಕಾರಿಗಳಾದ್ದಾಗಿರುತ್ತದೆ. 12ಡಿ ಮತದಾರರು ನಮೂನೆ 12ಡಿ ನಲ್ಲಿ ಯಾವ ವಿಳಾಸ ನೀಡಿರುತ್ತಾರೆಯೋ ಅಲ್ಲಿಯೇ ಮತದಾನ ಪ್ರಕ್ರಿಯೆ ನಡೆಯಬೇಕು ಎಂದು 12ಡಿ ಮತದಾನದ ಪ್ರಕ್ರಿಯೆ ಹಾಗೂ ನಡೆಸಬೇಕಾದ ವಿಧಾನದ ಕುರಿತು ತಿಳಿಸಿದರು.
ವಿಧಾನಸಭಾ ಮಟ್ಟದ ಮಾಸ್ಟರ್ ತರಬೇತುದಾರರುಗಳಿಗೆ ಯಾವುದೇ ಲೋಪದೋಷಗಳಿಲ್ಲದಂತೆ ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ಪೋಲಿಂಗ್ ಸಿಬ್ಬಂದಿಗೆ ಎಲ್ಲಾ ಚುನಾವಣಾ ಸಾಮಗ್ರಿಗಳ ಹಾಗೂ ಚುನಾವಣೆ ಸಮಯದಲ್ಲಿ ಬಳಸುವ ನಮೂನೆಗಳ ಕುರಿತು ಸಮಗ್ರವಾಗಿ ತರಬೇತಿ ನೀಡಲು ಚುನಾವಣಾಧಿಕಾರಿಗಳು ಸೂಚಿಸಿದರು.
ಚುನಾವಣಾ ಆಯೋಗದಿಂದ Karnataka Election Information System (KEIS) ಮೊಬೈಲ್‍ಆಪ್‍ನ್ನು ತಯಾರಿಸಿದ್ದು, ಎಲ್ಲಾ ಸೆಕ್ಟರ್ ಅಧಿಕಾರಿಗಳು ಈ ಆಪ್ ಡೌನ್‍ಲೋಡ್ ಮಾಡಿಕೊಂಡು, ಎಲ್ಲಾ ಮತಗಟ್ಟೆಗಳ ಶಾಲಾ ನಾಮಫಲಕ, ಜಾರುಬಂಡಿ (ರ್ಯಾಂಪ್), ಶಾಲಾ ಆವರಣ, ಶಾಲಾ ಕಟ್ಟಡ, ಪಾರ್ಕಿಂಗ್ ಜಾಗ ಮತ್ತು ಶೌಚಾಲಯಗಳ ಜಿಯೋ ಫೋಟೋಗಳನ್ನು ತೆಗೆದು ಇದೇ ಏಪ್ರಿಲ್ 8ರೊಳಗಾಗಿ ಆಪ್‍ನಲ್ಲಿ ಅಪ್‍ಲೋಡ್ ಮಾಡಲು ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ, 25 ಯೂನಿಕ್ ಮಗತಟ್ಟೆಗಳ ಸಿದ್ಧತೆಯ ಜವಾಬ್ದಾರಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ವಿಶೇಷ ಚೇತನ ಪೋಲಿಂಗ್ ಸಿಬ್ಬಂದಿ ಕಾರ್ಯ ನಿರ್ವಹಿಸುವ ಮತಗಟ್ಟೆಗಳ ಸಿದ್ದತೆಯ ಜವಾಬ್ದಾರಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಿಗೆ, ಮಹಿಳಾ ಮತದಾರರು ಹೆಚ್ಚು ಇರುವ ಕಡೆ ಪಿಂಕ್ ಮತಗಟ್ಟೆಗಳ ಸಿದ್ದತೆಯ ಜವಾಬ್ದಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಹಾಗೂ ವಿಶೇಷ ಥೀಮ್ ಉಳ್ಳ ಮತಗಟ್ಟೆಗಳ ಸಿದ್ದತೆಯ ಜವಾಬ್ದಾರಿ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗೆ ವಹಿಸಲಾಯಿತು.
ಸಭೆಯಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಸತ್ಯನಾರಾಯಣ, ತಹಶೀಲ್ದಾರ್ ಸತ್ಯನಾರಾಯಣ, ತಾಲ್ಲೂಕು ಪಂಚಾಯಿತಿ ಇಒ ಹನುಮಂತಪ್ಪ, ತರಬೇತಿ ನೋಡಲ್ ಅಧಿಕಾರಿಗಳಾದ ಚೈತ್ರ, ಧನಂಜಯ ಇದ್ದರು.