ಬೆಂಗಳೂರು: ಇಷ್ಟು ದಿನ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕರು 40% ಕಮಿಷನ್ ಆರೋಪದ ವಿಚಾರವನ್ನಿಟ್ಟುಕೊಂಡು ಸಾಕಷ್ಟು ವಾಗ್ದಾಳಿ ನಡೆಸಿದೆ. ಇದೀಗ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿಯೂ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಇರುವಂಥ ಪೋಸ್ಟರ್ ಗಳು ಸಹ ಓಡಾಡುತ್ತಿವೆ.
ಪೇಸಿಎಂ ಎನ್ನುವ ಪೋಸ್ಟರ್ ಜೊತೆಗೆ ಬೊಮ್ಮಾಯಿ ಅವರ ಫೋಟೋಗಳನ್ನು ಬಳಕೆ ಮಾಡಲಾಗಿದೆ. ಜಯಮಹಲ್ ರಸ್ತೆ, ಇಂಡಿಯನ್ ಎಕ್ಸ್ಪ್ರೆಸ್ ರಸ್ತೆ, ರೇಸ್ ಕೋರ್ಸ್ ರಸ್ತೆಗಳಲ್ಲಿ ಈ ರೀತಿಯ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ರಾತ್ರಿಯೇ ಮಾಡಿರುವ ಕೆಲಸ ಇದಾಗಿದೆ. ಈ ಪ್ರಕರಣ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ, ಪೋಸ್ಟರ್ ಗಳನ್ನೆಲ್ಲಾ ಕಿತ್ತು ಎಸೆದಿದ್ದಾರೆ.
ಆ ಪೋಸ್ಟರ್ ನಲ್ಲಿ ಸಿಎಂ ಬೊಮ್ಮಾಯಿ ಅವರ ಫೋಟೋ ಹಾಕುವುದರ ಜೊತೆಗೆ ಕ್ಯೂ ಆರ್ ಕೋಡ್ ನೀಡಲಾಗಿದೆ. ಇಲ್ಲಿ 40% ಕಮಿಷನ್ ಸ್ವೀಕರಿಸಲಾಗುತ್ತದೆ ಎಂದು ಪೋಸ್ಟ್ ಮಾಡಲಾಗಿದೆ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಮಿಷನರ್ ಪ್ರತಾಪ್ ರೆಡ್ಡಿ, ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಪೋಸ್ಟರ್ ಅಂಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.