ಕುರುಗೋಡು.(ನ.02) : ಸರಕಾರದ ನಿರ್ಲಕ್ಷ್ಯದಿಂದ ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅತಿಥಿ ಶಿಕ್ಷಕ ಎಸ್. ರಾಮಪ್ಪ ಆರೋಪ ಮಾಡಿದರು.
ಅತಿಥಿ ಶಿಕ್ಷಕರ ಗೌರವಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕುರುಗೋಡು ಪಟ್ಟಣದ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಧಿಕಾರಿಗೆ ಹಾಗೂ ತಾಪಂ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಶಿಕ್ಷಣ ಇಲಾಖೆಯ ಗುರಿ ಸಾಧನೆಗಾಗಿ ಮಕ್ಕಳ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರ ಅತಿಥಿ ಶಿಕ್ಷಕರಿಗೆ ಇಂತೀಷ್ಟು ಅಂತ ಗೌರನಧನ ನಿಗದಿಪಡಿಸಿದೆ. ಆದರೆ ವೇತನವು ನಾಲ್ಕರಿಂದ ಐದು ತಿಂಗಳು ಕಳೆದರೂ ನೀಡಿರುವುದಿಲ್ಲ. ಇದರಿಂದ ಅತಿಥಿ ಶಿಕ್ಷಕರ ಜೀವನ ಕಷ್ಟಕರವಾಗಿದೆ ಎಂದು ಅಳಲನ್ನು ತೋಡಿಕೊಂಡರು.
ಸರಕಾರ ನಿಗದಿಪಡಿಸಿರುವ ಗೌರವಧನ ಜೀವನಕ್ಕೆ ಸಾಕಾಗುವುದಿಲ್ಲ. ಹಾಗಾಗಿ ಜೀವನ ನಿರ್ವಹಣೆಗಾಗಿ ಸರಕಾರಿ ಶಿಕ್ಷಕರ ಮೂಲ ವೇತನದ ಅರ್ಧದಷ್ಟು ನೀಡುವುದರ ಜೊತೆಗೆ ದಸರಾ ರಜೆ ಹಾಗೂ ವರ್ಷದ 12 ತಿಂಗಳು ಗೌರವಧನ ನಿಗದಿಪಡಿಸಬೇಕು. ಪ್ರತಿ ತಿಂಗಳು ಸರಕಾರಿ ಶಿಕ್ಷಕರಿಗೆ ಸಂಬಳ ನೀಡುವ ದಿನಾಂಕದಂದೇ ಅತಿಥಿ ಶಿಕ್ಷಕರಿಗೆ ಪ್ರತಿ ತಿಂಗಳು ಗೌರವಧನ ಪಾವತಿಸಬೇಕು,” ಎಂದು ಮನವಿ ಮಾಡಿದರು.
ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿಸರಕಾರಿ ಶಾಲೆಯ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಶೇ.50ರಷ್ಟು ಹುದ್ದೆಗಳನ್ನು ಮೀಸಲಡಬೇಕು. ದೆಹಲಿ ಮತ್ತು ಹರಿಯಾಣ ರಾಜ್ಯದಲ್ಲಿ ಇರುವ ಆದೇಶ ನಮ್ಮ ರಾಜ್ಯದಲ್ಲಿ ಅಳವಡಿಸಿಕೊಂಡು ನೇಮಕಾತಿ ಅಡಿಯಲ್ಲಿ ಕಾಯಂಗೊಳಿಸಿ ಶಿಕ್ಷಕರಿಗೆ ಅನ್ವಯವಾಗುವ ರಜೆಗಳನ್ನು ನಮಗೂ ನೀಡಬೇಕು,” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ಶಿವಪ್ಪ, ಸಿ. ಚಂದ್ರಶೇಖರ, ಮಾರೆಪ್ಪ,ದೊಡ್ಡಬಸಪ್ಪ,ನಿರುಪಾದ ಯ್ಯ,ಶ್ರೀಧರ್ ಸೇರಿದಂತೆ ಇತರರು ಇದ್ದರು.