ಬೆಂಗಳೂರು: ಸುಪ್ರೀಂ ಕೋರ್ಟ್ ನಿಂದ ಪವಿತ್ರಾ ಗೌಡ ಸೇರಿದಂತೆ ಏಳು ಜನರ ಜಾಮೀನು ರದ್ದಾದ ಹಿನ್ನಲೆ ಇಂದು ಪೊಲೀಸರು ತಮ್ಮ ಕರ್ತವ್ಯ ಪಾಲನೆ ಮಾಡಿದ್ದಾರೆ. ಇಂದು ಪವಿತ್ರಾ ಗೌಡ ಅವರನ್ನ ಬಂಧಿಸಿದ್ದಾರೆ. ಕೋರ್ಟ್ ಆದೇಶ ಬಂದೊಡನೆ ಪೊಲೀಸರು ತಮ್ಮ ಕಾರ್ಯಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದರು.
ಬೆಳಗ್ಗೆನೆ ಪವಿತ್ರಾ ಗೌಡ ಮನೆಗೆ ಪೊಲೀಸರು ಬಂದಿದ್ದರು. ಅರೆಸ್ಟ್ ಮಾಡುವುದಕ್ಕೆ ಎಲ್ಲಾ ರೀತಿಯ ಪ್ರೊಸಿಜರ್ ಅನ್ನು ಮುಗಿಸಿ ಬಳಿಕ ಪವಿತ್ರಾ ಗೌಡ ಅವರನ್ನ ಬಂಧಿಸಿ, ಕರೆದುಕೊಂಡು ಹೋದರು. ಮೊದಲು ಕೋರ್ಟ್ ಮುಂದೆ ಹಾಜರುಪಡಿಸಿ, ಮೆಡಿಕಲ್ ಚೆಕಪ್ ಮಾಡಿಸಿ, ಆ ನಂತರ ಜೈಲಿಗೆ ಕಳುಹಿಸಲಿದ್ದಾರೆ. ಪವಿತ್ರಾ ಗೌಡ ವಕೀಲರು, ಆಕೆಯ ತಾಯಿ ಕೂಡ ಕೋರ್ಟ್ ಗೆ ಹೋಗಿದ್ದಾರೆ. ಇಂದೇ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತಾರೆ ಎಂಬ ಮಾಹಿತಿಯು ಇದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರು. ಏಳು ತಿಂಗಳ ಕಾಲ ಜೈಲಿನಲ್ಲಿದ್ದ ಪವಿತ್ರಾಗೆ ಹೈಕೋರ್ಟ್ ಜಾಮೀನು ನೀಡಿತ್ತು. ಆ ಜಾಮೀನು ಪ್ರಶ್ನಿಸಿ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಏಳು ಜನರ ಜಾಮೀನು ರದ್ದು ಮಾಡಿ, ಆದೇಶ ಹೊರಡಿಸಿದೆ. ಹೀಗಾಗಿ ಪವಿತ್ರಾ ಗೌಡ ಅವರನ್ನ ಬಂಧಿಸಲಾಗಿದೆ.






