ಸುದ್ದಿಒನ್, ಚಿತ್ರದುರ್ಗ, ಜನವರಿ. 03 : ಕಾಲೇಜು ವ್ಯಾಸಂಗ ಮಾಡುತ್ತಿರುವ ಯುವಕ ಯುವತಿಯರಲ್ಲಿ ದೇಶಭಕ್ತಿ ಮತ್ತು ಸೇವಾ ಮನೋಭಾವನೆ ಕಡಿಮೆ ಆಗುತ್ತಿದೆ ಎಂದು ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ನರೇನಹಳ್ಳಿ ಅರುಣ್ ಕುಮಾರ್ ಅಭಿಪಾಯಪಟ್ಟರು.
ಇಂದು ಭಾರತ ಸೇವಾದಳ ಮತ್ತು ಶಾಲಾ ಶಿಕ್ಷಣ ಪದವಿ ಪೂರ್ವ ಇಲಾಖೆ ಇವರ ಸಹಯೋಗದಲ್ಲಿ ನಗರದ ಭಾರತ ಸೇವಾದಳ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉಪನ್ಯಾಸಕರ ರಾಷ್ಟ್ರಧ್ವಜ ಮತ್ತು ಸೇವಾ ದಳ ಮಾಹಿತಿ ಕಾರ್ಯಗಾರ ಉದ್ದೇಶಿಸಿ ಅವರು ಮಾತನಾಡಿದರು. ಮೊಬೈಲ್ ಮತ್ತು ಅಂತರ್ಜಾಲ ಬಂದ ಮೇಲೆ ಯುವಕರು ಮೊಬೈಲಿಗೆ ಅವಲಂಬಿತರಾಗಿ ಅದರ ಉಪಯೋಗ ಪಡೆದುಕೊಳ್ಳದೆ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಮುಂದೆ ಇದು ಅವರ ಭವಿಷ್ಯಕ್ಕೆ ಮಾರಕ ಆಗಬಹುದೆಂದು ತಿಳಿಸಿದರು. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ದೇಶಭಕ್ತಿ ಭಾವೈಕ್ಯತೆ ಶಿಸ್ತು ದೇಶ ಪ್ರೇಮ ಬಿಂಬಿಸುವ ನೈತಿಕ ಶಿಕ್ಷಣವನ್ನು ಅವರಿಗೆ ನೀಡಬೇಕು ಎಂದು ತಿಳಿಸಿದರು.
ಭಾರತ ಸೇವಾದಳದ ವಲಯ ಸಂಘಟಕರಾದ ಅಣ್ಣಯ್ಯನವರು ಪ್ರಾಸ್ತಾವಿಕವಾಗಿ ಮಾತನಾಡಿ ಭಾರತ ಸೇವಾದಳದ ಅಮೃತ ಮಹೋತ್ಸವ ಮತ್ತು ಸೇವಾದಳ ಸಪ್ತಾಹದ ಕಾರ್ಯಕ್ರಮದ ಅಂಗವಾಗಿ ಈ ಕಾರ್ಯಗಾರವನ್ನು ನಡೆಸಲಾಗುತ್ತಿದ್ದು ಮುಂದಿನ ವರ್ಷದಲ್ಲಿ ಯುವಕರಿಗೆ ನಾಯಕತ್ವ ಶಿಬಿರಗಳನ್ನು ಕಾಲೇಜು ಮಟ್ಟದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕೋಶಾಧ್ಯಕ್ಷ ಶಿವಣ್ಣನವರು ಮಾತನಾಡಿ ಪಟ್ಟಣದಲ್ಲಿ ಪರಿಸರ ಸಂಪೂರ್ಣವಾಗಿ ಹಾಳಾಗಿದ್ದು ಹಳ್ಳಿಯಲ್ಲಿ ಪರಿಸರವನ್ನ ಸಂರಕ್ಷಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಗಿಡಮೂಲಿಕೆಗಳ ಉಪಯೋಗ ಇಂದು ನಶಿಸಿ ಹೋಗುತ್ತಿದೆ ಗಿಡಗಳ ವೈವಿಧ್ಯತೆ ಅದರ ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಿ ಸಸ್ಯ ಕುಲವನ್ನು ರಕ್ಷಿಸಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು. ತಾಲೂಕು ಸೇವಾದಳ ಅಧ್ಯಕ್ಷರಾದ ಕಾಟಮಲ್ಲಪ್ಪನವರು ವಹಿಸಿದ್ದರು. ಎನ್. ಕೆ. ರಾಜಪ್ಪ ಉಪಸ್ಥಿತರಿದ್ದರು. ಉಪನ್ಯಾಸಕರಾದ ಲೋಕೇಶ್ ಸ್ವಾಗತಿಸಿದರು ಮತ್ತು ಹೇಮಾವತಿ ನಿರೂಪಿಸಿದರು.

