ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.30 : ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಹಾಗೂ ನರಹರಿ ಟ್ರೇಡರ್ಸ್ ಮಾಲೀಕ ರವಿ ಜಿ. ಇವರುಗಳ ನಿಧನಕ್ಕೆ ಆಡುಮಲ್ಲೇಶ್ವರ ಸಮೀಪವಿರುವ ಸದ್ಗುರು ಸೇವಾಶ್ರಮದಲ್ಲಿ ಭಾನುವಾರ ಸವಿನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಪತಂಜಲಿ ಯೋಗ ಸಮಿತಿಯನ್ನು ಆರಂಭಿಸಿ ಜಿಲ್ಲೆಯಾದ್ಯಂತ ಯೋಗ ಶಿಬಿರಗಳನ್ನು ನಡೆಸಿದ ಮಲ್ಲಿಕಾರ್ಜುನಪ್ಪನವರ ನಿಧನದಿಂದ ಯೋಗ ಕಲಿಯುತ್ತಿದ್ದವರಿಗೆ ಅಪಾರ ನಷ್ಟವಾಗಿದೆ.
ಎಲ್ಲೆಡೆ ಯೋಗ ಶಿಬಿರಗಳನ್ನು ನಡೆಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸುತ್ತಿದ್ದ ಮಲ್ಲಿಕಾರ್ಜುನಪ್ಪನವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲಿ ಎಂದು ಅವರ ಅಪಾರ ಶಿಷ್ಯಂದಿರು ಪ್ರಾರ್ಥಿಸಿದರು.
ನರಹರಿ ಟ್ರೇಡರ್ಸ್ ಮಾಲೀಕ ರವಿ ಜಿ.ಇವರುಗಳು ಯೋಗಗುರು ಮಲ್ಲಿಕಾರ್ಜುನಪ್ಪನವರಿಗೆ ಬೆನ್ನುಲುಬಾಗಿ ನಿಂತು ಎಲ್ಲಾ ರೀತಿಯಲ್ಲಿಯೂ ಸಹಕರಿಸುತ್ತಿದ್ದರು. ಅವರ ಅಗಲಿಕೆಯೂ ಎಲ್ಲರ ಮನಸ್ಸಿಗೆ ನೋವುಂಟಾಗಿದೆ. ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ದಿವಂಗತ ಮಲ್ಲಿಕಾರ್ಜುನಪ್ಪನವರ ಪತ್ನಿ ಶ್ರೀಮತಿ ನಾಗರತ್ನಮ್ಮ, ಪುತ್ರ ಡಾ.ಭರತ್, ಅಳಿಯ ಡಾ.ರವಿಕುಮಾರ್, ದಿವಂಗತ ರವಿ ಜಿ.ರವರ ಪತ್ನಿ ಶ್ರೀಮತಿ ಲತಾ, ಪತಂಜಲಿ ಯೋಗ ಸಮಿತಿಯ ಕರ್ನಾಟಕ ರಾಜ್ಯ ಪ್ರಭಾರಿ ಭವರ್‍ಲಾಲ್ ಆರ್ಯ, ಶ್ರೀಮತಿ ಆರತಿ ಕಾಂಗೋ, ದೇವಾನಂದನಾಯ್ಕ, ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರು ಕಾರ್ಯದರ್ಶಿ, ಖಜಾಂಚಿ ವೇದಿಕೆಯಲ್ಲಿದ್ದರು.