ಚಿತ್ರದುರ್ಗದಲ್ಲಿ ಬಸ್ ಗಾಗಿ ಕಾಯುವ ಪ್ರಯಾಣಿಕರಿಗೆ ಫುಟ್ ಪಾತೇ ಗತಿ : ಗ್ರಾಮಾಂತರ ಪೊಲೀಸ್ ಠಾಣೆಯ ಬಳಿ ಜನರ ನಿತ್ಯ ಪರದಾಟ…!

3 Min Read

ಸುದ್ದಿಒನ್ ವಿಶೇಷ

ಚಿತ್ರದುರ್ಗ, ಆ.22 : ಬಸ್ ತಂಗುದಾಣ ಎಂದರೆ ಬಸ್ ನಿಲ್ದಾಣಗಳಲ್ಲಿ  ಪ್ರಯಾಣಿಕರಿಗಾಗಿಯೇ ನಿರ್ಮಿಸಲ್ಪಟ್ಟ ತಂಗುದಾಣ. ಬಸ್ ಬರುವವರೆಗೂ ಗಾಳಿ ಮಳೆಯಂತಹ ಸಂದರ್ಭಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿಯೇ ನಿರ್ಮಿಸಲ್ಪಟ್ಟ ಚಿಕ್ಕ ತಂಗುದಾಣವಾಗಿರುತ್ತದೆ. ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಸ್ವಲ್ಪ ಸಮಯದವರೆಗೂ ಅಥವಾ ಬಸ್ ಬರುವವರೆಗೂ ಕುಳಿತುಕೊಂಡು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತಹ ಚಿಕ್ಕ ತಂಗುದಾಣ ಎಲ್ಲೆಡೆಯೂ ಇರುತ್ತವೆ.

ನಗರದ ರಾಷ್ಟ್ರೀಯ ಹೆದ್ದಾರಿ 13 ರ ಬಳಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಹೊಂದಿಕೊಂಡಂತೆ NH 50 ಜಂಕ್ಷನ್ ನಲ್ಲಿ ಬಸ್ ತಂಗುದಾಣವಿದೆ. ಇದರ ವಿಶೇಷತೆ ಏನೆಂದರೆ ಪ್ರಯಾಣಿಕರಿಗಾಗಿ ನಿರ್ಮಿಸಲ್ಪಟ್ಟ ಈ ಬಸ್ ತಂಗುದಾಣದಲ್ಲಿ ಕೆಲವು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿದೆ. ಇಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನ ಸವಾರರು ‌ಇಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಬೇರೆ ಊರುಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಸಂಜೆ ಬಂದು ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಬಸ್ ತಂಗುದಾಣದ ಪ್ರದೇಶದಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ಸೇರಿದಂತೆ ಇತರೆ ವಾಹನಗಳನ್ನು ನಿಲ್ಲಿಸುತ್ತಾರೆ. ಇದೊಂದು ಪಾರ್ಕಿಂಗ್ ಅಡ್ಡೆಯಾಗಿದೆ.

 

ಇಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಿದ್ದರೂ ಯಾರಿಗೂ ಯಾವ ನಿಯಮಗಳೂ ವರ್ತಿಸುವುದಿಲ್ಲ, ಯಾರ ಭಯವೂ ಇಲ್ಲ. ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ. ಹಾಗಾಗಿ ಇಲ್ಲಿ ಈ ರೀತಿಯಾಗಿ ವಾಹನಗಳು ನಿಲ್ಲುತ್ತವೆ.

ಗುಡ್ಡದರಂಗವ್ವನಹಳ್ಳಿ, ಮಾಡನಾಯಕನ ಹಳ್ಳಿ, ಬಂಗಾರಕ್ಕನಹಳ್ಳಿ, ತುರುವನೂರು, ಚಿಕ್ಕಗೊಂಡನಹಳ್ಳಿ, ಕಲ್ಲೇದೇವಪುರ, ಜಗಳೂರು, ಕೂಡ್ಲಿಗಿ, ಹೊಸಪೇಟೆ   ಸೇರಿದಂತೆ ಈ ಭಾಗದ ವಿವಿಧ ಗ್ರಾಮಗಳಿಗೆ ಹೋಗುವ ಪ್ರಯಾಣಿಕರಿಗೆ ಈ ಬಸ್ ತಂಗುದಾಣವೇ ಆಶ್ರಯತಾಣ. ದುರಂತವೆಂದರೇ ಈ ತಂಗುದಾಣವು ನಿಲ್ದಾಣದಿಂದ ಸ್ವಲ್ಪ ದೂರವಿದ್ದು, ಅದರಲ್ಲಿ ವಾಹನಗಳನ್ನು ನಿಲ್ಲಿಸಿರುವುದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಫುಟ್ ಪಾತ್ ಮೇಲೆ ಕುಳಿತೋ, ಅಥವಾ ಹಾಗೆಯೇ ನಿಂತುಕೊಂಡು ಬಸ್ ಗಾಗಿ ಕಾಯುವ ಪರಿಸ್ಥಿತಿ ಇದೆ.

ಈ ಭಾಗದಲ್ಲಿ ಕೆಲವು ಶಾಲಾಕಾಲೇಜುಗಳಿದ್ದು, ರಾಷ್ಟ್ರೀಯ ಹೆದ್ದಾರಿ13 ರ ಮೂಲಕ ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಸಂಜೆ 4 ಗಂಟೆಯ ನಂತರ ವಿವಿಧ ಊರುಗಳಿಗೆ ತೆರಳಲು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಪ್ರಯಾಣಿಕರು ಇಲ್ಲಿಗೆ ಬರುತ್ತಾರೆ. ಆದರೆ ಅವರಿಗಾಗಿ ಸೂಕ್ತವಾದ ಬಸ್ ತಂಗುದಾಣವಿಲ್ಲದೇ ಗಾಳಿ, ಮಳೆ, ಚಳಿ ಮತ್ತು ಬಿಸಿಲಿನ ತಾಪದಿಂದ ಪರದಾಡುವಂತ ಸ್ಥಿತಿ ಇದೆ.

ಆದರೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿ ಬೃಹತ್ ಗಾತ್ರದ ಗೋಣಿ ಮಗ್ಗಿನ ಮರವಿದ್ದು, ಪ್ರಸ್ತುತ ಪ್ರಯಾಣಿಕರು ಈ ಮರವನ್ನು ಆಶ್ರಯಿಸುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಮರದ ನೆರಳಿನಡಿ ನಿಲ್ಲುತ್ತಾರೆ. ಆದರೆ ಜೋರಾಗಿ ಮಳೆ ಬಂದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಎರಡು ಪ್ರಮುಖ ಹೆದ್ದಾರಿಗಳು ಸಾಗಿ ಹೋಗುವ ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಚಿಕ್ಕದಾಗಿ ತಂಗುದಾಣ ನಿರ್ಮಿಸಿದೆ. ಅದೂ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿದೆ. ಹಾಗಾಗಿ ಇಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಎಷ್ಟೆಲ್ಲಾ ಆಧುನಿಕತೆಯ ಸೌಲಭ್ಯಗಳಿಂದ ಬದುಕುತ್ತಿರುವ ನಾವು ಬಸ್ ನಿಲ್ದಾಣದಲ್ಲಿ ತಂಗುದಾಣವಿದ್ದೂ ಇಲ್ಲದಂತಹ ಮತ್ತು ಉಪಯೋಗಿಸಲು ಅನುಕೂಲಕರವಾಗಿಲ್ಲದಂತಹ ದುಸ್ಥಿತಿಯಲ್ಲಿ ನಾವಿದ್ದೇವೆ ಎಂಬುದು ಸೋಜಿಗದ ಸಂಗತಿ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು  ಸೇರಿದಂತೆ ಇದಕ್ಕೆ ಸಂಬಂಧಿಸಿದಂತೆ ಇಲಾಖೆಯವರು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಒಂದು ಸುಸಜ್ಜಿತವಾದ ಸುರಕ್ಷಿತವಾದ ಬಸ್ ತಂಗುದಾಣ ನಿರ್ಮಾಣ ಮಾಡಲಿ ಎನ್ನುವುದು ಸುದ್ದಿಒನ್ ಆಶಯ.

ಪ್ರಯಾಣಿಕರ ಅಭಿಪ್ರಾಯ

ಗೇಟ್ ಹತ್ತಿರ ಇರುವ ತಂಗುದಾಣ ಸ್ವಲ್ಪ ದೂರವಿದೆ. ನಿಲ್ದಾಣ ಒಂದು ಕಡೆ, ತಂಗುದಾಣ ಒಂದು ಕಡೆ ಇದೆ. ಅಲ್ಲಿ ಕೂರಲು ಆಗುವುದಿಲ್ಲ. ಇಲ್ಲಿ ಕಲ್ಲು ಕುರ್ಚಿ ಇದ್ದರೂ ಸಾಕು. ಕುಳಿತುಕೊಳ್ಳಲು ಒಂದು ವ್ಯವಸ್ಥೆ ಆಗಬೇಕಿದೆ. ಮಳೆ ಬಂದರೆ ನಿಲ್ಲಲು ಆಗಲ್ಲ.ಕಲ್ಲು ಕುರ್ಚಿಗಳಾದರೂ ಇದ್ದರೆ ಅನುಕೂಲ ಆಗುತ್ತದೆ.ಕೈನೋವು, ಕಾಲು ನೋವು ಇದ್ದವರು ಕೂರಬಹುದು. ಫುಟ್ ಪಾತ್ ಮೇಲೆ ಕೂರಬೇಕು. ಹಾಗಾಗಿ ಇಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಂಗುದಾಣವಾಗಬೇಕು.

ಗಂಗಮ್ಮ, ಚಿಕ್ಕಗೊಂಡನಹಳ್ಳಿ

ನಾವು ಚಿತ್ರದುರ್ಗದಿಂದ ಬಂಗಾರಕ್ಕನಹಳ್ಳಿಗೆ ಹೋಗಬೇಕೆಂದರೆ ಬಸ್ಟಾಪ್ ಇಲ್ಲ ಇಲ್ಲಿ. ರೈತರಿಗೆ, ಹೆಣ್ಣು ಮಕ್ಕಳಿಗೆ, ಶಾಲಾ ಮಕ್ಕಳಿಗೆ ಕುಳಿತುಕೊಳ್ಳಲು ತೊಂದರೆಯಾಗುತ್ತಿದೆ. ಈ ಭಾಗದ ಊರುಗಳಿಗೆ ಹೋಗುವವರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಆದ್ದರಿಂದ ಇಲ್ಲಿ ಒಂದು ಬಸ್ಟಾಪ್ ಆಗಬೇಕು.

ಪಾಲಯ್ಯ, ರೈತರು, ಬಂಗಾರಕ್ಕನಹಳ್ಳಿ

Share This Article
Leave a Comment

Leave a Reply

Your email address will not be published. Required fields are marked *