ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳಲ್ಲಿ ಸೇವಾ ಮನೋಭಾವವಿರಬೇಕು : ಜಿ.ಎಂ.ಸಿದ್ದೇಶ್

2 Min Read

 

ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳಲ್ಲಿ ಸೇವಾ ಮನೋಭಾವವಿರಬೇಕೆಂದು ದಾವಣಗೆರೆ ಸಂಸದ ಹಾಗೂ ಕೇಂದ್ರದ ಮಾಜಿ ಮಂತ್ರಿ ಜಿ.ಎಂ.ಸಿದ್ದೇಶ್ ಹೇಳಿದರು.

ಪ್ರಧಾನಿ ನರೇಂದ್ರಮೋದಿ, ತಮ್ಮ ಪುತ್ರ ಅನಿತ್‍ಕುಮಾರ್ ಜಿ.ಎಸ್. ಹಾಗೂ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್‍ರವರ ಹುಟ್ಟುಹಬ್ಬದ ಅಂಗವಾಗಿ ಉಮಾಪತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸೇವಾ ಪಾಕ್ಷಿಕ ಕಾರ್ಯಕ್ರಮ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ ಶಿಬಿರ ಹಾಗೂ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ತಂದೆ ತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ಟ್ರಸ್ಟ್ ನಿಂದ ಪ್ರತಿ ವರ್ಷವೂ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ಮಕ್ಕಳಿಗೆ ನೋಟ್‍ಬುಕ್, ಪುಸ್ತಕ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ವಿತರಣೆ, ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಟ್ರಸ್ಟ್‌ನ ಹಣವನ್ನು ಬಳಸಿಕೊಂಡು ಇನ್ನು ಹೆಚ್ಚಿನ ಸೇವೆ ಮಾಡುವಂತೆ ಜಿ.ಎಸ್.ಅನಿತ್‍ಕುಮಾರ್ ಗೆ ಸೂಚಿಸಿದರು.

ದಾವಣಗೆರೆಯಲ್ಲಿಯೂ ಈ ರೀತಿಯ ಕಾರ್ಯಕ್ರಮ ನಡೆಯುತ್ತದೆ. ಸೇವಾ ಮನೋಭಾವ ಮುಖ್ಯ, ಇಬ್ಬರು ನೂರು ಕಾಲ ಬಾಳಿ ರಾಜ್ಯದ ಜನತೆಯ ಸೇವೆ ಮಾಡಲಿ ಎಂದು ಅನಿತ್‍ಕುಮಾರ್ ಹಾಗೂ ಕೆ.ಎಸ್.ನವೀನ್ ಇವರುಗಳಿಗೆ ಹಾರೈಸಿದರು.

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡುತ್ತ ಪ್ರಧಾನಿ ಮೋದಿರವರ ಹುಟ್ಟುಹಬ್ಬದ ಪ್ರಯುಕ್ತ ದೇಶದೆಲ್ಲೆಡೆ ಸೇವಾ ಪಾಕ್ಷಿಕ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕರ್ತರು ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು. ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಜಿ.ಎಸ್.ಅನಿತ್‍ಕುಮಾರ್, ಕೆ.ಎಸ್.ನವೀನ್ ಇವರುಗಳಿಗೆ ರಾಜಕೀಯದಲ್ಲಿ ಅಧಿಕಾರ ಸಿಗಲಿ ಎಂದು ಹುಟ್ಟು ಹಬ್ಬದ ಶುಭ ಕೋರಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಪ್ರಧಾನಿ ನರೇಂದ್ರಮೋದಿರವರ ಹುಟ್ಟುಹಬ್ಬದ ಅಂಗವಾಗಿ ಸೆ.17 ರಿಂದ ಗಾಂಧಿಜಯಂತಿವರೆಗೂ ಸೇವಾ ಪಾಕ್ಷಿಕ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತಿದೆ. ಉಚಿತ ಆರೋಗ್ಯ ತಪಾಸಣೆಯಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕಣ್ಣಿನ ಸಮಸ್ಯೆಯುಳ್ಳವರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಎಲ್ಲರೂ ದೊಡ್ಡ ದೊಡ್ಡ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ಕಷ್ಟ. ಯುವಕರಲ್ಲಿ ಸ್ವಾತಂತ್ರ್ಯೋತ್ಸವದ ಕಿಡಿ ಹಚ್ಚಿದ ಭಗತ್‍ಸಿಂಗ್, ಕಂಚಿನ ಕಂಠದ ಗಾಯಕಿ ಲತಾ ಮಂಗೇಶ್ಕರ್ ಇವರುಗಳು ಕೂಡ ಸೆ.28 ರಂದು ಹುಟ್ಟಿದ್ದು ಎಂದು ಅವರ ಸಾಧನೆಗಳನ್ನು ಸ್ಮರಿಸಿದರು.

ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜಿ.ಎಸ್.ಅನಿತ್‍ಕುಮಾರ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಏರ್ಪಡಿಸಿರುವುದು ಅರ್ಥಪೂರ್ಣವಾಗಿದೆ. ಇದರಿಂದ ಬಡವರಿಗೆ ನಿಜವಾಗಿಯೂ ಪ್ರಯೋಜನವಾಗಲಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಜಿ.ನರೇಂದ್ರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿ.ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್‍ಸಿದ್ದಾಪುರ, ಚಂದ್ರಿಕಾ ಲೋಕನಾಥ್, ಯುವ ಮುಖಂಡ ರಘುಚಂದನ್, ನಗರಸಭೆ ಸದಸ್ಯ ಭಾಸ್ಕರ್, ಮಾಧುರಿ ಗಿರೀಶ್, ನರೇಂದ್ರ, ಸಂಪತ್, ಜೈಪಾಲ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಶೈಲಜಾರೆಡ್ಡಿ, ಮಂಜುಳಮ್ಮ ವೇದಿಕೆಯಲ್ಲಿದ್ದರು.

ನೂರಾರು ಅಭಿಮಾನಿಗಳು ಜಿ.ಎಸ್.ಅನಿತ್‍ಕುಮಾರ್ ಹಾಗೂ ಕೆ.ಎಸ್.ನವೀನ್ ಇವರುಗಳಿಗೆ ಶಾಲು ಹಾರ ಹಾಕಿ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು.

ಜಿ.ಎಂ.ಆಸ್ಪತ್ರೆ ಬೆಂಗಳೂರು, ದೃಷ್ಟಿ ಕಣ್ಣಿನ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಕೀರ್ತಿ ಆಸ್ಪತ್ರೆ ವೈದ್ಯರುಗಳು ಉಚಿತ ಆರೋಗ್ಯ ತಪಾಸಣೆ ನಡೆಸಿದರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರು ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *