ಗಾಲಿ ಜನಾರ್ದನ ರೆಡ್ಡಿ ರಾಜಕೀಯಕ್ಕೆ ಬರಬೇಕು ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ. ಮತ್ತೆ ಬಿಜೆಪಿಗೆ ಹೋಗಬೇಕು ಎಂಬುದು ಅವರ ಮಹತ್ವಕಾಂಕ್ಷೆಯಾಗಿತ್ತು. ಆದ್ರೆ ಬಿಜೆಪಿ ಅದಕ್ಕೆ ಸ್ವಲ್ಪವೂ ಸೊಪ್ಪು ಹಾಕಲಿಲ್ಲ. ಅದರಿಂದ ಬೇಸತ್ತ ಗಾಲಿ ಜನಾರ್ದನ ರೆಡ್ಡಿ ಇದೀಗ ತಮ್ಮದೇ ಸ್ವಂತ ಪಕ್ಷ ಕಟ್ಟುವುದಕ್ಕೆ ತಯಾರಿ ನಡೆಸಿದ್ದಾರೆ. ರಾಜಕಾರಣಕ್ಕೆ ಬರಲೇಬೇಕೆಂದು ಹಠ ಮಾಡಿದ್ದಾರೆ.
ಬಳ್ಳಾರಿಯಿಂದ ಅಲ್ಲದೆ ಹೋದರು, ಕೊಪ್ಪಳದಿಂದ ಆದರೂ ಸರಿಯೇ ಎಂಬಂತೆ ರೆಡ್ಡಿ ರಾಜಕೀಯ ಎಂಟ್ರಿಗೆ ಸನ್ನದ್ಧರಾಗಿದ್ದಾರೆ. ಅದರ ಭಾಗವಾಗಿ ನಿನ್ನೆಯೆಲ್ಲಾ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಹನುಮನ ಮಾಲೆ ಧರಿಸಿ, ಭಕ್ತರಾಗಿದ್ದಾರೆ. ಮಾಲಾಧಾರಿಗಳ ಜೊತೆ ಪಾದಯಾತ್ರೆ ನಡೆಸಿದ್ದಾರೆ.
ಈ ಮಧ್ಯೆ ಪಂಪಾ ಸರೋವರದಲ್ಲಿ ಒಬ್ಬಂಟಿಯಾಗಿ ಪೂಜೆ ಸಲ್ಲಿಸಿದ್ದಾರೆ. ಅತ್ತ ಮೊಮ್ಮಗಳ ನಾಮಕರಣದಲ್ಲೂ ಶ್ರೀರಾಮುಲು ಕಾಣಿಸಿರಲಿಲ್ಲ. ಇತ್ತ ಆಪ್ತಮಿತ್ರ ಮಾಲೆ ಧರಿಸಿದಾಗಲೂ ಜೊತೆಯಾಗಿಲ್ಲ. ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂದರು ಅದನ್ನು ಇಬ್ಬರು ಒಪ್ಪುತ್ತಿಲ್ಲ. ನಮ್ಮಿಬ್ಬರ ಸ್ನೇಹ ಎಂದಿಗೂ ಕಡಿಮೆಯಾಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ.
ಆಪ್ತ ಮೂಲಗಳ ಪ್ರಕಾರ, ಶ್ರೀರಾಮುಲು ಪಕ್ಷದ ಆಜ್ಞೆ ಪಾಲಿಸಬೇಕಾ ಅಥವಾ ಆಪ್ತನ ಬಳಿ ಸೇರಬೇಕಾ ಎಂಬ ಗೊಂದಲದಲ್ಲಿದ್ದಾರಂತೆ. ಯಾಕಂದ್ರೆ ಹೈಕಮಾಂಡ್ ನಿಂದ ಖಡಕ್ ಸೂಚನೆಯೊಂದು ರವಾನೆಯಾಗಿದೆಯಂತೆ. ಇದರ ಗೊಂದಲದ ನಡುವೆ ಆಪ್ತನ ಜೊತೆಗೆ ಹೆಚ್ಚು ಕಾಣಿಸಿಕೊಳ್ಳಲು ಆಗುತ್ತಿಲ್ಲ ಎನ್ನಲಾಗಿದೆ.