ಬಾಗಲಕೋಟೆ: ಸಂಸತ್ ಒಳಗೆ ಕಲರ್ ಹೊಗೆ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಮನೋರಂಜನ್ ಗೆ ಸಂಬಂಧಿಸಿದವರು, ಸಂಪರ್ಕದಲ್ಲಿದ್ದವರನ್ನೆಲ್ಲಾ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಈ ಸಂಬಂಧ ಬಾಗಲಕೋಟೆಯಲ್ಲೂ ಒಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಅವರು ಮನೋರಂಜನ್ ರೂಮ್ ಮೇಟ್ ಆಗಿದ್ದರು ಎನ್ನಲಾಗಿದೆ.
ಮನೋರಂಜನ್ ಡೈರಿಯನ್ನು ಪರಿಶೀಲನೆ ಮಾಡುತ್ತಿರುವ ಪೊಲೀಸರು, ಅದರಲ್ಲಿ ನಮೂದಿಸಿದ್ದ ಸಾಯಿಕೃಷ್ಣ ಅವರನ್ನು ಅರೆಸ್ಟ್ ಮಾಡಿದ್ದಾರೆ. ಈ ಸಾಯಿಕೃಷ್ಣ ಬಾಗಲಕೋಟೆಯ ನಿವಾಸಿ. ಇವರ ತಂದೆ ನಿವೃತ್ತ ಡಿವೈಎಸ್ಪಿ. 2008-09ರಲ್ಲಿ ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದರು. ಇಲ್ಲಿಯೇ ಮನೋರಂಜನ್ ಜೊತೆಯಾಗಿದ್ದರು. ಬಳಿಕ ಮನೋರಂಜನ್ ಹಾಗೂ ಸಾಯಿಕೃಷ್ಣ ರೂಮ್ ಮೇಟ್ ಕೂಡ ಆಗಿದ್ದರು.
ಕಾಲೇಜು ಮುಗಿದ ಮೇಲೆ ಫೋನ್ ಸಂಪರ್ಕದಲ್ಲಿ ಇರುವುದು ಪೊಲೀಸರ ವಿಚಾರಣೆಯಲ್ಲಿ ತಿಳಿದಿದೆ. ಇನ್ನು ಮನೋರಂಜನ್ ತಮ್ನ ಡೈರಿಯಲ್ಲಿ ಕೂಡ ಮೆನ್ಶನ್ ಮಾಡಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಸಾಯಿಕೃಷ್ಣ ಅವರ ಅಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಮನೋರಂಜನ್ ರೂಮ್ ಮೇಟ್ ಆಗಿದ್ದ ಕಾರಣಕ್ಕೆ ಕರೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆಲ್ಲ ಅವನು ಉತ್ತರ ನೀಡಿದ್ದಾನೆ. ಈ ಮುಂಚೆ ಮನೋರಂಜನ್ ಕೂಡ ಸರಿಯಾಗಿಯೇ ಇದ್ದ. ಆದರೆ ಈಗ ಯಾಕೆ ಆ ರೀತಿ ಆದ ಎಂಬುದು ಮಾತ್ರ ಗೊತ್ತಿಲ್ಲ. ನನ್ನ ತಮ್ಮನಿಗೂ ಅದಕ್ಕೂ ಸಂಬಂಧವಿಲ್ಲ. ರೂಮ್ ಮೇಟ್ ಆಗಿದ್ದ ಎಂಬ ಕಾರಣಕ್ಕೆ ಅವನನ್ನು ಕರೆದು ವಿಚಾರಣೆ ಮಾಡಿದ್ದಾರೆ ಅಷ್ಟೆ ಎಂದು ಸಾಯಿಕೃಷ್ಣ ಸಹೋದರಿ ತಿಳಿಸಿದ್ದಾರೆ.