ಮೈಸೂರು: ಸಂಸತ್ ಒಳಗೆ ಇಬ್ಬರು ಯುವಕರು ಏಕಾಏಕಿ ನುಗ್ಗಿ ದಾಳಿ ನಡೆಸಿರುವ ಘಟನೆ ಸಂಬಂಧ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಅದರಲ್ಲಿ ಒಬ್ಬ ಆರೋಪಿ ಮೈಸೂರಿನ ಮನೋರಂಜನ್ ಆಗಿದ್ದಾನೆ. ಈ ಘಟನೆ ಬಗ್ಗೆ ಮನೋರಂಜನ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನ ವಿಜಯನಗರದಲ್ಲಿ ಮಾತನಾಡಿದ ಮನೋರಂಜನ್ ತಂದೆ ದೇವರಾಜೇಗೌಡ ಅವರು, ಮನೋರಂಜನ್ ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ 2014ರಲ್ಲಿ ಬಿಇ ಸೀಟನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ಕೊಟ್ಟಿದ್ದರು. ಕೆಲಸ ಇರಲಿಲ. ತೋಟಕ್ಕೆ ಬರುತ್ತಿದ್ದ ಖರ್ಚಿಗೆ ಬೇಕಾದಾಗ ಹಣ ತೆಗೆದುಕೊಳ್ಳುತ್ತಿದ್ದ. 34 ವರ್ಷ ಆಯ್ತು. ಮದುವೆಯಾಗು ಅಂತಿದ್ದೆ. ಇರಪ್ಪ ನಾನು ಏನೋ ಮಾಡಬೇಕು ಅಂತಿದ್ದ. ಯಾವಾಗಲೂ ಭಗತ್ ಸಿಂಗ್, ವಿವೇಕಾನಂದ ಅವರ ಪುಸ್ತಕವನ್ನೇ ಓದುತ್ತಿದ್ದ. ದೆಹಲಿ, ಬೆಂಗಳೂರು ಅಂತ ಓಡಾಡುತ್ತಿದ್ದ. ಹೋಗುತ್ತಾ ಇದ್ದ, ಬರುತ್ತಾ ಇದ್ದ. ಆದರೆ ಎಲ್ಲಿಗೆ ಹೋಗುತ್ತಿದ್ದ ಎಂಬುದು ಮಾತ್ರ ಗೊತ್ತಿಲ್ಲ.
ನಾವೂ ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ಪ್ರತಾಪ್ ಸಿಂಹ ಅವರಿಗೆ ವೋಟು ಹಾಕಿದ್ದೇವೆ. ಮನೆಯಲ್ಲಿ, ಸಮಾಜದಲ್ಲಿ ಎಲ್ಲಿಯೂ ಯಾರಿಗೂ ಆತ ಕೆಟ್ಟದ್ದು ಮಾಡಿದ್ದವನಲ್ಲ. ಈಗ ಯಾಕೆ ಈ ರೀತಿ ಮಾಡಿದ ಎಂಬುದು ತಿಳಿಯುತ್ತಿಲ್ಲ. ಮಗ ಈ ಥರ ಮಾಡ್ತಾನೆ ಅಂತ ನನಗೆ ಗೊತ್ತಿರಲಿಲ್ಲ. ಅವನೇನಾದ್ರೂ ಒಳ್ಳೆಯದು ಮಾಡಿದ್ರೆ ದೇವರು ಕಾಪಾಡಲಿ. ಕೆಟ್ಟದ್ದನ್ನು ಮಾಡಿದ್ರೆ ನಾನು ಖಂಡಿಸುತ್ತೇನೆ. ಸಮಾಜಕ್ಕೆ ಅನ್ಯಾಯ ಮಾಡಿದ್ದಾನೆಂದರೆ ಆತ ನನ್ನ ಮಗನೇ ಅಲ್ಲ ಎಂದು ಮಗನ ಬಗ್ಗೆ ಮಾತನಾಡಿದ್ದಾರೆ.
ಈಗಾಗಲೇ ಪೊಲೀಸರು ವಿಜಯನಗರದಲ್ಲಿರುವ ಮನೋರಂಜನ್ ನಿವಾಸಕ್ಕೆ ಪೊಲೀಸರು ದೌಡಾಯಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಪಿಐ ಸುರೇಶ್ ಭೇಟಿ ನೀಡಿ ಮನೋರಂಜನ್ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.