ಸುದ್ದಿಒನ್, ಚಿತ್ರದುರ್ಗ, ಜನವರಿ. 18 : ಮಕ್ಕಳನ್ನು ಶಾಲೆಗೆ ಸೇರಿಸಿದರೆ ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲ. ಶಾಲೆಯ ಜೊತೆಗೆ ಪೋಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲುದಾರರಾಗಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಶನಿವಾರ “ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ-37ನೇ ವರ್ಷಾಚರಣೆಯ ವಿಜಯೋತ್ಸವ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಕ್ಕಳು ಉತ್ತಮ ಸಂಸ್ಕಾರವಂತರಾಗಬೇಕಾದಲ್ಲಿ ಶಾಲೆಯ ಜೊತೆಗೆ ಪೋಷಕರು ಬಹು ಮುಖ್ಯವಾದ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ಧಾರವಾಡದ ವಿಸ್ತಾರ್ ಜಿಂದಗಿ ಹ್ಯೂಮನ್ ಮೈಂಡ್ಸೆಟ್ ಕೋಚ್ ಮಹೇಶ್ ಮಾಸಾಲ್ ಮಾತನಾಡಿ, ಇಂದಿನ ಶಿಕ್ಷಣ ಕೇವಲ ಫಲಿತಾಂಶ ಬಯಸುವ ಮನೋಭಾವನೆ ಇರುವ ಪೋಷಕರಾಗಿದ್ದಾರೆ. ಆ ಮನೋಭಾವನೆ ಬದಲಾವಣೆಯಾಗಬೇಕು. ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳು ಅಡಕವಾಗಿದ್ದು, ಅವುಗಳನ್ನು ಹುಡುಕುವ ಜವಾಬ್ದಾರಿ ಶಿಕ್ಷಕರ ಜೊತೆ ಪೋಷಕರದು ಬಹು ಮುಖ್ಯವಾಗಿರುತ್ತದ. ಅಲ್ಲದೆ ಇಂದಿನ ರಾಷ್ಟ್ರಪತಿಗಳಾಗಿರುವ ದ್ರೌಪದಿ ಮುರ್ಮು ಹಾಗೂ ಎಪಿಜೆ ಅಬ್ದುಲ್ ಕಲಾಂ ಅವರುಗಳ ಜೀವನ ನಮ್ಮೆಲ್ಲರಿಗೂ ಆದರ್ಶಪ್ರಾಯ ಎಂದು ಹೇಳಿದರು.

ಮುಖ್ಯವಾಗಿ ಪೋಷಕರಾಗಿರುವ ನಾವುಗಳು ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಅವರ ಬೇಕು-ಬೇಡಗಳನ್ನು ಅರಿತು ಉತ್ತಮ ಶಿಕ್ಷಣದ ಜೊತೆ ಸಂಸ್ಕಾರ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿದೆ. ಇಂದಿನ ಪೋಷಕರ ಮನೋಭಾವನೆ ಹೇಗಿದೆ ಎಂದರೆ ಪಠ್ಯ, ಪುಸ್ತಕ, ಪರೀಕ್ಷೆ ,ಫಲಿತಾಂಶ, ಪ್ರಮಾಣ ಪತ್ರ, ಇದಕ್ಕಷ್ಟೇ ಸೀಮಿತರಾಗಿರುವುದು. ಒಂದಷ್ಟು ಬದಲಾವಣೆಗಳನ್ನು ಪೋಷಕರು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ ಕುಮಾರ್ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಅತೀ ಅಗತ್ಯ. ಹಾಗಾಗಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮಕ್ಕಳಲ್ಲಿತುವ ಪ್ರತಿಭೆಯನ್ನು ಅನಾವರಣ ಮಾಡಲು ಅನುವು ಮಾಡಿಕೊಡುತ್ತದೆ ಎಂದರು.
ವಿದ್ಯಾವಿಕಾಸ ರತ್ನ ಪ್ರಶಸ್ತಿ ಪ್ರದಾನ: ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ವಿಶೇಷ ಸಾಧನೆ ಮಾಡಿದ ನ್ಯೂರೋಲಾಜಿಸ್ಟ್ ಡಾ.ಕಿರಣ್ ಗೌಡ ಅವರಿಗೆ ಹಾಗೂ ಹಿಂದಿನ ವರ್ಷಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕಗಳಿಸಿದ ವಿದ್ಯಾವಿಕಾಸ ಸಂಸ್ಥೆಯ ವಿದ್ಯಾರ್ಥಿಗಳಾದ ಹೆಚ್.ವಿ.ಸಮನಾ, ಡಿ.ಎಸ್.ದಿಷಾ ಅವರಿಗೆ “ವಿದ್ಯಾವಿಕಾಸ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪೋಷಕರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ವಾರ್ಷಿಕೋತ್ಸವದಲ್ಲಿ ಮಕ್ಕಳ ಕಲರವ: ಮುಸ್ಸಂಜೆ ವಾತಾವರಣದಲ್ಲಿ ಶಾಲೆಯ ವಿದ್ಯಾರ್ಥಿಗಳು ಮಹಾಭಾರತ, ರಾಮಾಯಣ, ಜನಪದ ಸಂಪದ ಥೀಮ್ ಒಳಗೊಂಡ ವಿವಿಧ ನೃತ್ಯಪ್ರಕಾರಗಳ ಪ್ರಸ್ತುತಪಡಿಸುವ ಮೂಲಕ ‘ಭಾರತದ ಸಾಂಸ್ಕೃತಿಕ ವೈವಿಧ್ಯ’ವನ್ನು ವೇದಿಕೆ ಮೇಲೆ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ನಿರ್ದೇಶಕಿ ಸುನೀತಾ ವಿಜಯ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ.ಪೃಥ್ವೀಶ, ಪ್ರಾಂಶುಪಾಲ ಪಿ.ಬಸವರಾಜಯ್ಯ, ಮುಖ್ಯ ಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ ಇದ್ದರು.








