ಪರಶುರಾಂಪುರ ಕೆರೆ ಕೋಡಿ: ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ  ತಹಶೀಲ್ದಾರ್ ಎನ್.ರಘುಮೂರ್ತಿ ಸೂಚನೆ

suddionenews
1 Min Read

 

ಚಿತ್ರದುರ್ಗ,(ಅಕ್ಟೋಬರ್14) : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಕೆರೆ ತುಂಬಿದ ಹಿನ್ನೆಲೆಯಲ್ಲಿ, ಕೆರೆಯ ಕೋಡಿ ನೀರು ಹರಿದು ಗೌರಿಪುರ ಮತ್ತು ಹಾಲಿಗೊಂಡನಹಳ್ಳಿ ಗ್ರಾಮದ ವಾಸಿಗಳ ಮನೆಗಳಿಗೆ ನೀರು ನುಗಿದ್ದರಿಂದ ಈ ಮನೆಗಳಲ್ಲಿರುವ ನಾಗರಿಕರನ್ನು ಪರ್ಯಾಯ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ಗೌರಿಪುರ ಗ್ರಾಮದ 32 ಕುಟುಂಬಗಳನ್ನು ಕೃಷಿ ಇಲಾಖೆಯ ಸಂಸ್ಕರಣ ಘಟಕದಲ್ಲಿ ಪುನವರ್ಸತಿ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಕುಟುಂಬದ ಸದಸ್ಯರಿಗೆ ಊಟ ಮತ್ತು ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದೆ.

ಹಾಲಿಗೊಂಡನಹಳ್ಳಿ ಗ್ರಾಮದಲ್ಲಿನ ಬ್ಯಾರೇಜಿನಲ್ಲಿ ನೀರು ಹರಿಯುತ್ತಿರುವುದರಿಂದ ಈ ಗ್ರಾಮದ ಕಾಲೋನಿಯ ಅಂದಾಜು 15 ಕುಟುಂಬಗಳಿಗೆ ರಂಗ ಮಂದಿರದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದ್ದು, ಊಟ ಮತ್ತು ದಿನನಿತ್ಯದ ವಸ್ತುಗಳನ್ನು ಪೂರೈಸಲಾಗುತ್ತಿದೆ. ನೀರಿನ ಹರಿವು ಕಡಿಮೆಯಾದ ತಕ್ಷಣ ಸಂತ್ರಸ್ಥರು ಅವರ ಮನೆಗೆ ಹೋದ ಕ್ಷಣವೇ ಕೇಂದ್ರಗಳನ್ನು ಮುಚ್ಚಲಾಗುವುದು.

ನೀರು ಆಳವಾಗಿ ಹರಿಯುತ್ತಿರುವುದರಿಂದ ನೀರಿನಲ್ಲಿ ಮಕ್ಕಳು ಮತ್ತು ವೃದ್ಧರನ್ನು ಇಳಿಸದಂತೆ ಹಾಗೂ ಮಹಿಳೆಯರು ಬಟ್ಟೆ ಮುಂತಾದವುಗಳನ್ನು ತೊಳೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಚಳ್ಳಕೆರೆ ತಾಲ್ಲೂಕು ತಹಶೀಲ್ದಾರ್ ಎನ್.ರಘುಮೂರ್ತಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *