ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ : ಸೂರಜ್ ಎಂ.ಎನ್.ಹೆಗಡೆ  

suddionenews
2 Min Read

ಚಿತ್ರದುರ್ಗ, ಫೆಬ್ರವರಿ.01 : ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಅಸ್ಸಾಂ, ಜಾರ್ಖಂಡ್, ಮಹಾರಾಷ್ಟ್ರ, ಮಧ್ಯ ಪ್ರದೇಶ, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ರಾಜ್ಯಕ್ಕೆ ಭೇಟಿ ನೀಡಿವೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್.ಹೆಗಡೆ ಈ ಸಂದರ್ಭದಲ್ಲಿ ಹೇಳಿದರು.

ಶನಿವಾರ ನಗರದ ಜಿ.ಪಂ. ಕಚೇರಿ ಆವರಣದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ನೂತನ ಕಚೇರಿಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಈ ಯೊಜನೆಗಳ ಜಾರಿಯಿಂದ ರಾಜ್ಯದ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬಂದಿದೆ.  ಜಿಎಸ್‍ಟಿ ಹಾಗೂ ಜಿಡಿಪಿ ಬೆಳವಣಿಗೆಯಲ್ಲಿ ರಾಜ್ಯ ಮಂಚೂಣಿಯಲ್ಲಿದೆ. ರಾಜ್ಯದ ಜನತೆ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಪಕ್ಷಭೇದವಿಲ್ಲದೆ ಎಲ್ಲಾ ಜನರಿಗೂ ಯೋಜನೆಯ ಲಾಭ ದೊರೆಯುತ್ತಿವೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ,  ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 3,78,084 ಫಲಾನುಭವಿಗಳ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ಸರಿ ಸುಮಾರು ರೂ.14 ಕೋಟಿ ವ್ಯಯಿಸಲಾಗುತ್ತಿದೆ. ಕಳೆದ 17 ತಿಂಗಳಿನಲ್ಲಿ ರೂ.234 ಕೋಟಿ ಅಧಿಕ ಹಣವನ್ನು ಯೋಜನೆಗಾಗಿ ಸರ್ಕಾರ ಬಿಡುಗಡೆ ಮಾಡಿದೆ. ಗೃಹಲಕ್ಷ್ಮೀ ಯೋಜನೆಯಡಿ 3,96,025 ಫಲಾನುಭವಿಗಳಿಗೆ ಪ್ರತಿ ತಿಂಗಳು ಡಿಬಿಟಿ ಮೂಲಕ ರೂ.2000 ಖಾತೆಗೆ ಜಮೆ ಮಾಡಲಾಗುತ್ತಿದೆ. ಇದರ ಮೊತ್ತ ರೂ.1092 ಕೋಟಿಗೂ ಅಧಿಕವಾಗಿದೆ. ಅನ್ನಭಾಗ್ಯ ಯೋಜನೆಯಡಿ 3,65,890 ಫಲಾನುಭವಿಗಳಿಗೆ 7014 ಮೆಟ್ರಿಕ್ ಟನ್ ಅಕ್ಕಿ ನೀಡಲಾಗಿದೆ. 5 ಕೆ.ಜಿ ಅಕ್ಕಿ ಪರ್ಯಾಯವಾಗಿ ರೂ.170 ರಂತೆ ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗೆ ರೂ.20 ಕೋಟಿ ಜಮೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಚಿತ್ರದುರ್ಗ ವಿಭಾಗದ ಬಸ್‍ಗಳಲ್ಲಿ ಪ್ರತಿನಿತ್ಯ 62,000 ಕ್ಕೂ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕಾಗಿ  ರೂ.147.13 ಕೋಟಿ ಹಣವನ್ನು ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ಸರ್ಕಾರ ಪಾವತಿಸಿದೆ. ಜಿಲ್ಲೆಯಲ್ಲಿ 26,086 ಪದವಿ ಹಾಗೂ 291 ಡಿಪ್ಲೋಮೊ ವ್ಯಾಸಾಂಗ ಪೂರ್ಣಗೊಳಿಸಿದ ಯುವಕರು ಯುವನಿಧಿಯಡಿ ನೊಂದಣಿ ಮಾಡಿಕೊಂಡಿದ್ದಾರೆ. ಪದವಿ ವಿದ್ಯಾಭ್ಯಾಸ ಪೂರ್ಣಗೊಳಿಸಿದವರಿಗೆ ರೂ.3000 ಹಾಗೂ ಡಿಪ್ಲೋಮೊ ಮುಗಿಸಿದವರಿಗೆ ರೂ.1,500 ಮಾಸಿಕ ನಿರುದ್ಯೋಗ ಭತ್ಯ ನೀಡಲಾಗುತ್ತಿದೆ. ಇದುವರೆಗೂ  ರೂ.7.8 ಕೋಟಿ ಯುವನಿಧಿಯಡಿ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

 

ಕಾರ್ಯಕ್ರಮದಲ್ಲಿ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಕೆ.ಡಿ.ಪಿ ಸದಸ್ಯ ಕೆ.ಸಿ.ನಾಗರಾಜ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳಾದ ಡಿ.ಎನ್.ಮೈಲಾರಪ್ಪ, ಜಿ.ಟಿ.ಬಾಬುರೆಡ್ಡಿ, ಖಾದಿ ಜೆ.ರಮೇಶ್, ಬಿ.ಟಿ.ನಿರಂಜನ ಮೂರ್ತಿ, ಸದಸ್ಯರಾದ ನಾಗೇಶ್ ರೆಡ್ಡಿ, ಅಬ್ದುಲ್ಲಾ ಶಾ ವಲಿ, ಟಿ.ಕೃಷ್ಣಮೂರ್ತಿ, ನಾಗರಾಜ್, ಹೇಮಂತ ಯಾದವ್, ಮಹಮದ್ ಇಸ್ಮಾಯಿಲ್, ಎ.ಲೋಹಿತ್, ಕೆ.ಎ.ತಿಪ್ಪೇಶ್, ಎಲ್.ಇಂದಿರಾ, ಪಿ.ಆರ್.ಶಿವಕುಮಾರ್, ಮಧುಪಾಲೇಗೌಡ, ಟಿ.ಪ್ರಕಾಶ್, ಚನ್ನಕೇಶವ, ಜಿ.ಪಿ.ಸುರೇಶ್ ಸೇರಿದಂತೆ ತಾಲ್ಲೂಕು ಅನುಷ್ಠಾನ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *