ಸುದ್ದಿಒನ್ ವೆಬ್ ಡೆಸ್ಕ್
ಆಟವಾಗಲೀ, ಯುದ್ದವಾಗಲೀ ದಾಯಾದಿ ದೇಶ ಪಾಕಿಸ್ತಾನಕ್ಕೆ ಭಾರತ ಸೋಲಬೇಕು ಎನ್ನುವುದು ಸಾಮಾನ್ಯ. ಆದರೆ ಸದ್ಯದ ಪರಿಸ್ಥಿತಿಯಲ್ಲಿ T20 ವಿಶ್ವಕಪ್-2022 ರಲ್ಲಿ ಇಡೀ ಪಾಕಿಸ್ತಾನ ಭಾರತ ತಂಡದ ಗೆಲುವಿಗೆ ಹಾರೈಸುತ್ತಿರುವುದು ಗಮನಾರ್ಹ. ಗ್ರೂಪ್ ಹಂತದಲ್ಲಿ ಭಾರತ ತನ್ನ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕೆಂದು ಪಾಕಿಸ್ತಾನ ಬಯಸುತ್ತದೆ.
ಅದರಲ್ಲೂ ನಾಳೆ (ಅಕ್ಟೋಬರ್ 30) ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಲಿ ಎಂದು ಪಾಕ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಏಕೆಂದರೆ.. ಸೂಪರ್-12 ಗುಂಪು-2ರಲ್ಲಿ ಟೀಂ ಇಂಡಿಯಾ ಮೊದಲೆರಡು ಪಂದ್ಯಗಳನ್ನು ಗೆದ್ದು 4 ಅಂಕಗಳೊಂದಿಗೆ ರ್ಯಾಂಕಿಂಗ್ ನಲ್ಲಿ ಗ್ರೂಪ್ ಟಾಪರ್ ಆಗಿದೆ. ಇನ್ನೂ ಇದೇ ಗುಂಪಿನಲ್ಲಿರುವ ಪಾಕಿಸ್ತಾನ ಮೊದಲೆರಡು ಪಂದ್ಯಗಳನ್ನು ಸೋತು ರ್ಯಾಂಕಿಂಗ್ ನಲ್ಲಿ ಕೆಳಿಗಿನಿಂದ ಎರಡನೇ ಸ್ಥಾನದಲ್ಲಿದೆ.
ಪರಿಸ್ಥಿತಿ ಹೀಗಿರುವಾಗ ಪಾಕಿಸ್ತಾನ ಸೆಮಿಫೈನಲ್ ತಲುಪಬೇಕಾದರೆ ಮುಂದಿನ 3 ಪಂದ್ಯಗಳನ್ನು (ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್) ಗೆಲ್ಲುವುದು ಮಾತ್ರವಲ್ಲದೆ ಭಾರತ ಮುಂದಿನ 3 ಪಂದ್ಯಗಳನ್ನು (ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಜಿಂಬಾಬ್ವೆ) ಗೆಲ್ಲಬೇಕಾಗಿದೆ.
ಈ ಪಂದ್ಯಗಳ ಜೊತೆಗೆ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಆಡಲಿರುವ 3 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆಲ್ಲಬೇಕಾಗಿದೆ. ಇದೆಲ್ಲ ನಡೆದರೆ ಗ್ರೂಪ್-2ರಿಂದ ಭಾರತ 10 ಅಂಕ ಹಾಗೂ ಪಾಕಿಸ್ತಾನ 6 ಅಂಕಗಳೊಂದಿಗೆ ಸೆಮಿಸ್‌ಗೆ ಅರ್ಹತೆ ಪಡೆಯಲಿದೆ.
ಈ ಲೆಕ್ಕಾಚಾರದ ಹಿನ್ನಲೆಯಲ್ಲಿ ಗ್ರೂಪ್-2ರ ಯಾವುದೇ ಪಂದ್ಯಕ್ಕೂ ವರುಣ ಅಡ್ಡಿಯಾಗದಂತೆ ಭಾರತವು, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಜಿಂಬಾಬ್ವೆ ತಂಡಗಳನ್ನು ಸೋಲಿಸಬೇಕೆಂಬುದು ಪಾಕಿಸ್ತಾನದ ಅಭಿಮಾನಿಗಳ ಅಪೇಕ್ಷೆ. ಏತನ್ಮಧ್ಯೆ, ಭಾರತವು ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಗೆದ್ದಿದೆ. ಆದರೆ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಭಾರತ ಮತ್ತು ಜಿಂಬಾಬ್ವೆ ಎರಡನೇ ಪಂದ್ಯದಲ್ಲಿ ಸೋತಿತು.
ಈ ಎಲ್ಲಾ ಕಾರಣಗಳಿಂದ ಸೆಮಿಫೈನಲ್ ರೇಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ತಂಡಗಳು ಜೀವಂತವಾಗಿರಲು ಪಾಕಿಸ್ತಾನದ ಅಭಿಮಾನಿಗಳು ಬರುವ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಬಯಸುತ್ತಿವೆ.