ಮಂಡ್ಯದ ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ

1 Min Read

 

ನವದೆಹಲಿ: 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನ ಘೋಷಣೆ ಮಾಡಲಾಗಿದ್ದು, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಕನ್ನಡ ಜ್ಞಾನ ದಾಸೋಹಿ, ಪುಸ್ತಕ ಭಂಡಾರ ಸೃಷ್ಟಿಸಿದ ಮಂಡ್ಯ ಜಿಲ್ಲೆಯ ಅಂಕೇಗೌಡ ಅವರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಂಕೇಗೌಡ ಅವರು ದೊಡ್ಡ ಜ್ಞಾನ ಭಂಡಾರವನ್ನೇ ಸೃಷ್ಟಿಸಿದ್ದಾರೆ. ಪಾಂಡವಪುರದಿಂದ ಕೇವಲ ಒಂದು ಕಿಲೋ ಮೀಟರ್ ದೂರದ ಹರಳಹಳ್ಳಿಯಲ್ಲಿ ಪುಸ್ತಕದ ಮನೆಯನ್ನು ನಿರ್ಮಾಣ ಮಾಡಿದ್ದು, ಅಲ್ಲಿ ಲಕ್ಷಗಟ್ಟಲರೆ ಪುಸ್ತಕಗಳನ್ನು ಸಂಗ್ರಹ ಮಾಡಿದ್ದಾರೆಮ ಒಂದೊಂದೇ ಪುಸ್ತಕ ಸಂಗ್ರಹ ಮಾಡುತ್ತಾ ಸಂಗ್ರಹಾಲಯವನ್ನೇ ತೆರೆದಿದ್ದಾರೆ. ಯಾವುದೇ ವಿಷಯದ ಪುಸ್ತಕವಾದರೂ ಅಲ್ಲಿ ದೊರೆಯಲಿದೆ. ಈಗಾಗಲೇ ಈ ಪುಸ್ತಕದ ಮನೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರಿಕೊಂಡಿದೆ. ಪ್ರತಿಯೊಂದು ಪುಸ್ತಕವೂ ಮೌಲ್ಯಯುತವಾದದ್ದಾಗಿದೆ. ಸಣ್ಣ ಕಟ್ಟದಲ್ಲಿಯೇ ಮೊದ ಮೊದಲು ಪುಸ್ತಕ ಮನೆಯನ್ನು ಆರಂಭಿಸಲಾಗಿತ್ತು. ಈಗ ಉದ್ಯಮ ಹರಿಕೋಡೆ ಕಟ್ಟಿಕೊಟ್ಟ ಕಟ್ಟಡ ಈ ಪುಸ್ತಕದ ಮನೆಗೆ ಮತ್ತೊಂದು ಆಯಾಮ ನೀಡಿದೆ.

ಅಂಕೇಗೌಡರ ಈ ದೊಡ್ಡ ಸಾಧನೆಗೆ ಅವರ ಪತ್ನಿಯ ಸಹಕಾರವೂ ಇದೆ. ಪುಸ್ತಕಗಳ ಜೋಡಿಸುವಿಕೆಯಿಂದ ಹಿಡಿದು ಸ್ವಚ್ಛತಾ ಕಾರ್ಯದಲ್ಲೂ ಕೈಜೋಡಿಸಿ ಪತಿಯ ಕಾರ್ಯಕ್ಕೆ ಅವರು ಸಹಕಾರ ನೀಡುತ್ತಾ ಬಂದಿದ್ದಾರೆ. ಒಮ್ಮೆ ಈ ಪುಸ್ತಕದ ಮನೆಗೆ ನೀವು ಕಾಲಿಟ್ಟರೆ ಸಾಕು ಪುಸ್ತಕ ಲೋಕವೇ ನಿಮ್ಮ ಕಣ್ಣ ಮುಂದೆ ಬಂದು ಬಿಡುತ್ತದೆ. ಹೊಟ್ಟೆಯ ಹಸಿವಿಗಿಂತ ಜ್ಞಾನದ ಹಸಿವು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಪಾಂಡವಪುರ-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಹೋದರೆ ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯಲಿದೆ ಈ ಪುಸ್ತಕದ ಮನೆ.

Share This Article